ನವದೆಹಲಿ:ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದು ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಪೂರ್ಣ ದಾಖಲೆಗಳನ್ನು ಎಐಸಿಸಿ ಶೀಘ್ರದಲ್ಲೇ ದೆಹಲಿಯಲ್ಲಿ ಬಿಡುಗಡೆ ಮಾಡಲಿದೆ.
ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ 6,58,915 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ 6,26,208 ಮತ ಪಡೆದು 32,707 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
ರಾಹುಲ್ ಗಾಂಧಿ ಆರೋಪ
ಈ ಸೋಲಿಗೆ ಬಿಜೆಪಿ ಆಯೋಗದ ಜೊತೆ ಸೇರಿ ನಡೆಸಿರುವ ಚುನಾವಣಾ ಅಕ್ರಮವೇ ಕಾರಣ ಎಂದು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕ್ಷೇತ್ರದಲ್ಲಿ ಅಕ್ರಮ ನಡೆದು ಪಕ್ಷದ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ ಎಂಬ ಸಂಶಯದ ಮೇಲೆ ಖಾಸಗಿ ಏಜೆನ್ಸಿ ಮೂಲಕ ತನಿಖೆ ನಡೆಸಿ ದಾಖಲೆ ಸಮೇತ ವರದಿ ಸಿದ್ಧಪಡಿಸಿದ್ದಾರೆ.
ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳೇ ಹೆಚ್ಚಾಗಿವೆ, ಈ ಕ್ಷೇತ್ರಗಳಲ್ಲಿ ಎರಡು ವಿಧಾನಸಭಾ ಕ್ಷೇತ್ರ ಹೊರತುಪಡಿಸಿದರೆ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ.
50,000ಕ್ಕೂ ಹೆಚ್ಚು ಮತ
ಲೋಕಸಭಾ ಚುನಾವಣಾ ಮತ ಎಣಿಕೆಯಲ್ಲಿ ಪಕ್ಷದ ಮನ್ಸೂರ್ ಅಲಿ ಖಾನ್ ಕೊನೆ ಸುತ್ತಿನ ಮತ ಎಣಿಕೆವರೆಗೂ ತಮ್ಮ ಪ್ರತಿಸ್ಪರ್ಧಿಗಿಂತ 50,000ಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡಿದ್ದರು.
ಕ್ಷೇತ್ರದ ಸರ್ವಜ್ಞನಗರ, ಶಾಂತಿನಗರ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಕೆಲವು ವಾರ್ಡ್‌ಗಳಲ್ಲಿ ಶೇಕಡ 90ಕ್ಕಿಂತ ಹೆಚ್ಚು ಬಿಜೆಪಿ ಅಭ್ಯರ್ಥಿಗೆ ಮತ ಚಲಾವಣೆಗೊಂಡು ಅವರು ಕಡೇ ಸುತ್ತಿನ ಎಣಿಕೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಈ ಮೂರೂ ಕ್ಷೇತ್ರಗಳಲ್ಲಿ ಹಾಲಿ ಮತದಾರರನ್ನು ವ್ಯವಸ್ಥಿತವಾಗಿ ಕೈಬಿಟ್ಟು ಸುಮಾರು 70,000ಕ್ಕೂ ಹೆಚ್ಚು ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.

ಸಾಂಗ್ಲಿ, ಸೊಲ್ಲಾಪುರ ಮತದಾರರು
ಹೊಸದಾಗಿ ಸೇರ್ಪಡೆಗೊಂಡವರು ಬಹುತೇಕ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಸೊಲ್ಲಾಪುರ ಲೋಕಸಭಾ ಕ್ಷೇತ್ರಗಳಲ್ಲಿರುವ ಮತದಾರರಾಗಿದ್ದು, ಇಲ್ಲಿಯೂ ಹೊಸದಾಗಿ ನೋಂದಾಯಿಸಲಾಗಿದೆ.
ಈ ಮತದಾರರು ಚುನಾವಣೆ ವೇಳೆ ಆಗಮಿಸಿ ಮತದಾನ ಮಾಡಿ ನಂತರ ತಮ್ಮ ಸ್ವಕ್ಷೇತ್ರಗಳಿಗೆ ತೆರಳಿ ಅಲ್ಲಿಯೂ ಮತದಾನ ಮಾಡಿದ್ದಾರೆ ಎಂಬ ಬಗ್ಗೆ ತನಿಖಾ ಸಂಸ್ಥೆ ದಾಖಲೆ ಸಮೇತ ವರದಿ ನೀಡಿದೆಯಂತೆ.
ಸೆಂಟ್ರಲ್ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಸಂಸ್ಥೆ ಸವಿವರವಾದ ವರದಿ ಸಿದ್ಧಪಡಿಸಿದ್ದು, ಈಗ ಗ್ರಾಫಿಕ್ ವಿಡಿಯೊ ಸಿದ್ಧಪಡಿಸುತ್ತಿದೆ.
ಶೀಘ್ರ ದಾಖಲೆ ಬಿಡುಗಡೆ
ಪೂರ್ಣ ಪ್ರಮಾಣದ ವರದಿ ಎಐಇಸಿ ಕೈಸೇರುತ್ತಿದ್ದಂತೆ ರಾಹುಲ್ ಗಾಂಧಿ ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲೇ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಪ್ರಾಥಮಿಕವಾಗಿ ಮಾಡಿದ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ ತಳ್ಳಿಹಾಕಿದೆ.
ರಾಹುಲ್ ಈ ಆರೋಪ ಮಾಡುತ್ತಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರು ಗ್ರಾಮಾಂತರದಲ್ಲಿ ತಮ್ಮ ಸಹೋದರ ಡಿ.ಕೆ.ಸುರೇಶ್ ಸೋಲಿಗೂ ಇಂತಹದ್ದೇ ಷಡ್ಯಂತ್ರ ನಡೆದಿದೆ ಎಂದು ಆಪಾದಿಸಿದ್ದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಗಿಂತ ಸುಮಾರು 3 ಲಕ್ಷಕ್ಕೂ ಹೆಚ್ಚು ಮತ ಗಳಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು.


