ಬೆಂಗಳೂರು:ಸೋಮವಾರದಿಂದ ನಡೆಯಲಿರುವ ವಿಧಾನಮಂಡಲದ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ತೀವ್ರ ಮಾತಿನ ಸಮರಕ್ಕೆ ಕಾರಣವಾಗಲಿದೆ.
ಹಣಕಾಸು ಇಲಾಖೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಫೆಬ್ರವರಿ-ಮಾರ್ಚ್‌ನಲ್ಲಿ ಮಂಡಿಸಿದ 2025-26ನೇ ಸಾಲಿನ ಮುಂಗಡಪತ್ರ ಅಧಿವೇಶನ ನಂತರದ ಅಧಿವೇಶನ ಇದಾಗಿದೆ.
ಮತಗಳ್ಳತನ ಆರೋಪ
ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದ ಜನತೆ ಎದುರಿಸಿರುವ ಸಮಸ್ಯೆಗಳ ಜೊತೆ ಮತಗಳ್ಳತನ ಆರೋಪ, ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತದಿಂದ ಉಂಟಾದ ಸಾವು-ನೋವು.
ವಿಜಯೋತ್ಸವದಲ್ಲಿ ಸರ್ಕಾರದ್ದೇ ಲೋಪವಿದ್ದರೂ ಪೋಲಿಸರು ಮತ್ತು ಸಂಸ್ಥೆಗಳ ಮೇಲೆ ಆರೋಪ ಹೊರಿಸಿದ ವಿಷಯ ಚರ್ಚೆಗೆ ಗ್ರಾಸವಾಗಲಿದೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಿಂದ ಆರಂಭಗೊಂಡ ಕೃಷಿ ಚಟುವಟಿಕೆಗೆ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ವೈಫಲ್ಯ ಆಗಿದೆ ಎಂದು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ.
ಕಾಂಗ್ರೆಸ್ ಸಿಲುಕಿದೆ
ಗುತ್ತಿಗೆದಾರರಿಂದ ಶೇಕಡ 40 ಕಮಿಷನ್ ಪಡೆದ ಆರೋಪವನ್ನು ಹಿಂದಿನ ಸರ್ಕಾರದ ಮೇಲೆ ಹೊರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈ ಬಾರಿ ಇದೇ ಆರೋಪದಲ್ಲಿ ಸಿಲುಕಿದೆ.
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚುತ್ತಿರುವುದು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಾಗೂ ಪ್ರಮುಖ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳದಿರುವ ಬಗ್ಗೆ ಪ್ರಸ್ತಾಪಿಸಲು ಪ್ರತಿಪಕ್ಷಗಳು ಸಜ್ಜುಗೊಂಡಿವೆ.
ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ಕುರಿತ ಚರ್ಚೆಯಿಂದ ಆಡಳಿತ ಹಳಿತಪ್ಪಿದೆ ಎಂಬ ವಿಷಯ ಪ್ರಸ್ತಾಪವಾಗಲಿದ್ದು, ಕಳೆದ ಅಧಿವೇಶನ ವೇಳೆ ಸಚಿವ ಕೆ.ಎನ್.ರಾಜಣ್ಣ ಪ್ರಸ್ತಾಪಿಸಿದ್ದ ಹನಿಟ್ರ್ಯಾಪ್ ಮತ್ತೊಮ್ಮೆ ಪ್ರತಿಧ್ವನಿಸಲಿದೆ.

ಶಾಸಕರ ಸಭೆ
ಸರ್ಕಾರದ ಲೋಪಗಳನ್ನು ಎತ್ತಿಹಿಡಿಯಲು ಮತ್ತು ವಿಧಾನಸಭೆಯಲ್ಲಿ ವಿಷಯಗಳನ್ನು ಎಳೆ ಎಳೆಯಾಗಿ ಬಿಡಿಸಿಡಲು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಮ್ಮ ಪಕ್ಷದ ಶಾಸಕರ ಸಭೆ ಕರೆದು ಚರ್ಚಿಸಿದ್ದಾರೆ.
ಪ್ರತಿಪಕ್ಷಗಳ ಟೀಕಾಸ್ತ್ರಗಳನ್ನು ಸಮರ್ಪಕವಾಗಿ ಎದುರಿಸಿ ತಕ್ಕ ಉತ್ತರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 12ರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.


