ಬೆಂಗಳೂರು:ನಗರ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಅಕ್ರಮ ಬಡಾವಣೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿಧಾನ ಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಲ್ಲದೆ, ಬೆಂಗಳೂರು ಮಾದರಿಯಲ್ಲಿ ಉಳಿದ ನಗರಗಳಲ್ಲೂ ಆಸ್ತಿಗಳಿಗೆ ಇ-ಖಾತೆ ನೀಡುವ ಬಗ್ಗೆ ಸರ್ಕಾರ ಗಂಬೀರ ಚಿಂತನೆ ನಡೆಸಿದೆ ಎಂದರು.
ಸಿ.ಎನ್.ಮಂಜೇಗೌಡ ನಿಯಮ ೩೩೦ರಡಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಅಕ್ರಮ ಬಡಾವಣೆಗಳನ್ನು ತೆರವುಗೊಳಿಸುವಲ್ಲಿ ವಿಫಲರಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ಕಟ್ಟಡಕ್ಕೂ ಅನುಮತಿ ಇಲ್ಲ
ವಿನ್ಯಾಸ ಅನುಮೋದನೆ ಪಡೆಯದೇ ಬಡಾವಣೆ ನಿರ್ಮಿಸಿದರೆ ಅಕ್ರಮ, ಇಂತಹ ಬಡಾವಣೆಗಳ ನಿವೇಶನಗಳ ಖಾತೆ ಮಾಡದಂತೆ ನಿರ್ಬಂಧ ಹೇರಲಾಗಿದೆ, ಅಲ್ಲದೇ, ಅಂತಹ ಬಡಾವಣೆಗಳ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೂ ಅನುಮತಿ ನೀಡುವುದಿಲ್ಲ ಎಂದರು.
ಅನಧಿಕೃತ ಬಡಾವಣೆಗಳ ನಿರ್ಮಾಣವನ್ನು ತಡೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1960ರ ಕಲಂ 17(4)ರ ಅಡಿ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ.
ಅಧಿಕಾರಿಗಳಿಗೆ ದಂಡ
ಅಕ್ರಮ ನಿರ್ಮಾಣ ತಡೆಗಟ್ಟಲು ವಿಫಲರಾಗುವ ಅಧಿಕಾರಿಗಳಿಗೆ ದಂಡ ವಿಧಿಸುವ ಅಥವಾ ಅಮಾನತು ಮಾಡುವ ಅಥವಾ ಕೆಲಸದಿಂದಲೇ ವಜಾ ಮಾಡುವ ಅಧಿಕಾರ ಸರ್ಕಾರಕ್ಕಿದೆ ಎಂದರು.
ಹಲವು ನಗರ ಪ್ರದೇಶಗಳಲ್ಲಿ ಬಡವರಿಗೆ ನಿವೇಶನ ಹಂಚಿಕೆ ಕುರಿತು ಯೋಜನೆ ರೂಪಿಸಲಾಗುತ್ತಿದೆ, ಭೂಮಾಲೀಕರಿಗೆ ಶೇ.50 ಮತ್ತು ನಿವೇಶನಗಳಾಗಿ ಶೇ.50ರಷ್ಟು ಪ್ರದೇಶ ಮೀಸಲಿಟ್ಟು ನಿವೇಶನಗಳ ಹಂಚಿಕೆ ಮಾಡಲಾಗುತ್ತದೆ ಎಂದರು.

