ಬೆಂಗಳೂರು:ನವೆಂಬರ್‌ನಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಕ್ರಾಂತಿಯೂ ಆಗುತ್ತೆ, ವಾಂತಿಯೂ ಆಗುತ್ತೆ, ಪಕ್ಷ ಸರ್ವನಾಶ ಆಗುತ್ತೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇಂದಿಲ್ಲಿ ತಿಳಿಸಿದ್ದಾರೆ.
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಜೊತೆಗೂಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ಮತ್ತು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ದೊಡ್ಡ ಕ್ರಾಂತಿಯೇ ನಡೆಯಲಿದೆ ಎಂದರು.
ರಾಜಕೀಯ ನಿವೃತ್ತಿ ಇಲ್ಲ
ಮುಂಬರುವ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದಿಲ್ಲ ಎಂದು ಹೇಳಿದ್ದೇನೆಯೇ ಹೊರತು ರಾಜಕೀಯ ನಿವೃತ್ತಿ ಆಗುತ್ತೇನೆ ಎಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣಾ ರಾಜಕೀಯದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ, ನನ್ನ ಹೇಳಿಕೆಯನ್ನು ನೀವುಗಳು ತಿರುಚುವುದು ಬೇಡ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ, ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಿದರೆ, ಎಂತಹ ಹುದ್ದೆಗಳಾದರೂ ದೊರೆಯುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇಲ್ಲ
ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಅಶೋಕ್ ಕಾರ್ಯನಿರ್ವಹಿಸುತ್ತಿದ್ದಾರೆ, ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇಲ್ಲ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ನನ್ನನ್ನು ಗುರುತಿಸಿ ಕೇಂದ್ರ ಸಂಪುಟದಲ್ಲಿ ಎರಡು ಇಲಾಖೆಗಳ ಹೊಣೆ ವಹಿಸಿದ್ದಾರೆ.
ನಾನು 36 ರಾಜ್ಯಗಳಲ್ಲೂ ಇಲಾಖೆ ಕೆಲಸ ಮಾಡುತ್ತಿದ್ದೇನೆ, ನನ್ನ ಇಲಾಖೆಯಲ್ಲಿ 49,000 ಕೋಟಿ ರೂ. ಕಾಮಗಾರಿ ಕೈಗೊಂಡಿದ್ದೇವೆ.
50 ವರ್ಷಗಳ ಬಾಕಿ ಕೆಲಸ
ತುಮಕೂರಿನಲ್ಲಿ ಕಳೆದ 50 ವರ್ಷಗಳಿಂದ ಆಗದ ಕೆಲಸಗಳನ್ನು ಕೈಗೆತ್ತಿಕೊಂಡಿದ್ದೇನೆ, ಜೊತೆಗೆ ಬೆಂಗಳೂರು ನಗರದಿಂದ 100 ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ರೈಲ್ವೆ ಕೆಳ ಮತ್ತು ಮೇಲ್ಸೇತುವೆ ಕಾಮಗಾರಿಗಳನ್ನು ಕೈಗೊಂಡಿದ್ದೇನೆ.
ನನಗೆ ನೀಡಿರುವ ಹೊಣೆಗಾರಿಕೆಯನ್ನು, ಅದರಲ್ಲೂ ಪ್ರಧಾನಿ ಮೋದಿ ಅವರು ಮುಂಚೂಣಿಯಲ್ಲಿ ನಿಂತು ದೇಶ ಕಟ್ಟುತ್ತಿರುವ ಕೆಲಸದಲ್ಲಿ ನಾನು ಒಂದು ಸಣ್ಣ ಮೆಟ್ಟಿಲಾಗಿ ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ ತೃಪ್ತಿ ಇದೆ.
ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಿದರೆ ಎಂತಹ ಹುದ್ದೆಗಳಾದರೂ ದಕ್ಕಬಹುದು ಎಂದು ಪರೋಕ್ಷವಾಗಿ ರಾಜ್ಯಾಧ್ಯಕ್ಷ ಹೊಣೆ ನೀಡಿದರೂ ನಿರ್ವಹಿಸಬಲ್ಲೆ ಎಂದರು.
ಹಿಂದೂ ಭಾವನೆಗಳಿಗೆ ಧಕ್ಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ಓಲೈಕೆಗಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಕಿಡಿಕಾರಿದರು.
ಧರ್ಮಸ್ಥಳ ವಿಚಾರವಾಗಿ ಏನೋ ಮಾಡಲು ಹೋಗಿ, ಅಡಕೊತ್ತಿನಲ್ಲಿ ಸಿಲುಕಿದ್ದಾರೆ, ಸತ್ಯ ಬಹಿರಂಗವಾಗಿದೆ, ವಿಷಯ ತಿಳಿದ ನಂತರವಾದರೂ ಸಿದ್ದರಾಮಯ್ಯ, ರಾಜ್ಯದ ಜನರ ಕ್ಷಮೆ ಕೋರಬೇಕಿತ್ತು, ಈ ಪ್ರಕರಣ ಮುಗಿಯುತ್ತಿದ್ದಂತೆ ಚಾಮುಂಡಿಬೆಟ್ಟವನ್ನು ಕೈಗೆತ್ತಿಕೊಂಡಿದ್ದಾರೆ ಎಂದರು.
ಬಾನು ಮುಸ್ತಾಕ್ ಆಯ್ಕೆಗೆ ಆಕ್ಷೇಪ
ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಸ್ತಾಕ್ ಆಯ್ಕೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸೋಮಣ್ಣ, ರಾಜಮನೆತನ ಪೂಜಿಸಿಕೊಂಡು ಬಂದಂತಹ ದೇವಿಗೆ ಸರ್ಕಾರ ಅಪಚಾರ ಎಸಗುತ್ತಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಮುಂಡಿಬೆಟ್ಟದ ಬಗ್ಗೆ ಮಾಡಿರುವ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

