ಬೆಂಗಳೂರು:ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿಢೀರನೆ ಸಿಂಗಪೂರ್‌ಗೆ ಒಂದು ದಿನದ ಖಾಸಗಿ ಪ್ರವಾಸ ಕೈಗೊಂಡು ಹಿಂತಿರುಗಿರುವುದು ಪಕ್ಷದ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಿಶೇಷ ವಿಮಾನದಲ್ಲಿ ಗುರುವಾರ ಸಿಂಗಪೂರ್‌ಗೆ ತೆರಳಿದ ಶಿವಕುಮಾರ್ ಕೆಲವೇ ತಾಸುಗಳು ಅಲ್ಲಿ ತಂಗಿದ್ದು, ಇಂದು ಮುಂಜಾನೆ ನಗರಕ್ಕೆ ಹಿಂತಿರುಗಿದ್ದಾರೆ.
ಶುಕ್ರವಾರ ಬೆಳಗ್ಗೆ ಆಗಮನ
ನಿನ್ನೆ ಬೆಳಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ನಂತರ ವಿದೇಶ ಪ್ರವಾಸ ಕೈಗೊಂಡ ಉಪಮುಖ್ಯಮಂತ್ರಿ, ಶುಕ್ರವಾರ ಬೆಳಗ್ಗೆ ಆಗಮಿಸಿ, ಮೊದಲೇ ನಿಗದಿಪಡಿಸಿದ ಮಾಗಡಿ ಕಾರ್ಯಕ್ರಮಕ್ಕೆ ತೆರಳಿದರು.
ಉನ್ನತ ಮೂಲಗಳ ಪ್ರಕಾರ, ಕುಟುಂಬದ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಂಗಪೂರ್‌ಗೆ ತೆರಳಿದ್ದಾರೆ ಎಂದು ಒಂದು ವರ್ಗ ಹೇಳಿದರೆ, ಮತ್ತೊಂದು ವರ್ಗ ಇಂದಿನ ರಾಜಕೀಯ ಬೆಳವಣಿಗೆಯೊಂದಿಗೆ ಥಳಕು ಹಾಕುತ್ತಿದೆ.
ಆದರೆ, ಉಪಮುಖ್ಯಮಂತ್ರಿ ವಿದೇಶ ಪ್ರವಾಸ ಕುರಿತು ಯಾವುದೇ ಮಾಹಿತಿ ನೀಡದೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ.
ರಾಜ್ಯದ ಅಧಿಕಾರ ಚುಕ್ಕಾಣಿ ಖಚಿತ
ನವೆಂಬರ್‌ನಲ್ಲಿ ರಾಜ್ಯದ ಅಧಿಕಾರ ಚುಕ್ಕಾಣಿ ದಕ್ಕುವುದು ಖಚಿತ ಎಂಬ ವಿಶ್ವಾಸದಲ್ಲಿರುವ ಶಿವಕುಮಾರ್, ತಮ್ಮ ವಿರೋಧಿಗಳು ಹೆಣೆಯುತ್ತಿರುವ ರಾಜಕೀಯ ಮೇಲಾಟಗಳಿಗೆ ಪ್ರತಿಯಾಗಿ ತಂತ್ರ ರೂಪಿಸುತ್ತಿದ್ದಾರೆ.
ಇದರ ನಡುವೆ, ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆ ಹಾಡಿದ್ದು, ಚಾಮುಂಡಿಬೆಟ್ಟ ಕೇವಲ ಹಿಂದೂಗಳ ಆಸ್ತಿಯಲ್ಲ ಎಂಬ ಹೇಳಿಕೆ ಭಾರೀ ವಿವಾದವನ್ನು ಹುಟ್ಟುಹಾಕಿದೆ.
ಆರ್‌ಎಸ್‌ಎಸ್ ಗೀತೆ ಬಗ್ಗೆ ವರಿಷ್ಠರು ಗರಂ ಆದ ನಂತರ ಬಹಿರಂಗವಾಗಿ ಶಿವಕುಮಾರ್ ಕ್ಷಮೆಯಾಚಿಸಿದರು.
ರಾಜಕೀಯ ಅಸ್ತ್ರ
ಇದಾದ ನಂತರ ಚಾಮುಂಡಿಬೆಟ್ಟದ ಬಗ್ಗೆ ನೀಡಿರುವ ಹೇಳಿಕೆಯನ್ನು ಪ್ರತಿಪಕ್ಷ ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿದೆ.
ಇದರ ಬಗ್ಗೆ ವಾದ-ಪ್ರತಿವಾದ ನಡೆಯುತ್ತಿರುವ ಬೆನ್ನಲ್ಲೇ ವಿದೇಶ ಪ್ರವಾಸ ಕೈಗೊಂಡು ಹಿಂತಿರುಗಿದ್ದಾರೆ, ಅಲ್ಲಿ ಯಾರನ್ನು ಭೇಟಿಯಾದರೂ, ಯಾವ ವಿಷಯಕ್ಕೆ ಹೋಗಿದ್ದರು ಎಂಬುದೆಲ್ಲವೂ ಗೌಪ್ಯ.
ಪ್ರವಾಸದಿಂದ ಹಿಂತಿರುಗಿದ ನಂತರವೂ ಚಾಮುಂಡಿಬೆಟ್ಟ ಅಥವಾ ಇತರ ಯಾವುದೇ ವಿಷಯದಲ್ಲಿ ಮಾತನಾಡಲು ಆಸಕ್ತಿ ತೋರದೆ, ಕೆಲವು ದಿನಗಳ ಕಾಲ ಮೌನಕ್ಕೆ ಶರಣಾಗಲು ನಿರ್ಧರಿಸಿದ್ದಾರಂತೆ.

