ಬೆಂಗಳೂರು:ಸಚಿವ ಸ್ಥಾನದಿಂದ ಪದಚ್ಯುತಗೊಂಡ ಕೆ.ಎನ್.ರಾಜಣ್ಣ ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೇ ದೆಹಲಿಯಲ್ಲಿ ಕಹಳೆ ಮೊಳಗಿಸಲು ಅಣಿಯಾಗಿದ್ದಾರೆ.
ತಮ್ಮ ಬೆಂಬಲಿಗರು ಹಾಗೂ ವಾಲ್ಮೀಕಿ ಸಮುದಾಯವನ್ನು ದೆಹಲಿಯ ಜಂತರ್ ಮಂಥರ್‌ನಲ್ಲಿ ಸಮಾವೇಶಗೊಳಿಸಿ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ಮುಂದಾಗಿದ್ದಾರೆ.
ಸ್ಥಳೀಯ ಆಡಳಿತದ ಅನುಮತಿ
ಸಮಾವೇಶ ಸಿದ್ಧತೆಗಾಗಿ ಕಳೆದ ವಾರ ತಮ್ಮ ಕುಟುಂಬ ಸದಸ್ಯರ ಜೊತೆ ದೆಹಲಿಯಲ್ಲೇ ಬಿಡಾರ ಹೂಡಿದ್ದ ರಾಜಣ್ಣ ಸಮಾವೇಶ ನಡೆಸಲು ಸ್ಥಳೀಯ ಆಡಳಿತದ ಅನುಮತಿ ಕೋರಿದ್ದಾರೆ.
ಕರ್ನಾಟಕದಿಂದ ತಮ್ಮ ಸಮುದಾಯವನ್ನು ದೆಹಲಿಗೆ ಕರೆದೊಯ್ಯಲು ಎರಡು ವಿಶೇಷ ರೈಲುಗಳನ್ನು ತುಮಕೂರಿನಿಂದ ನೀಡುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಪತ್ರ ನೀಡಿದ್ದಾರೆ.
ರಾಜಣ್ಣ ಕರೆಗೆ ಈಗಾಗಲೇ 6,000 ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದು ಒಟ್ಟು 10 ರಿಂದ 15,000 ಬೆಂಬಲಿಗರನ್ನು ಕಲೆ ಹಾಕಲು ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ.
ಸ್ವಾಮೀಜಿಗಳ ಸಾಂತ್ವನ
ರಾಜಣ್ಣ ನಿವಾಸಕ್ಕೆ ಭೇಟಿ ನೀಡಿದ ಹಿಂದುಳಿದ, ದಲಿತ ಪರ ಸಮುದಾಯಗಳ ಮಠಾಧೀಶರು, ಸಂತರು ಆಶೀರ್ವದಿಸಿ, ಸಾಂತ್ವನ ಹೇಳಿದರು.

ಸ್ವಾಮೀಜಿಗಳ ಸಾಂತ್ವನಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ಇಂದು ಬಹಳ ಸಂತೋಷ ಮತ್ತು ಹೆಮ್ಮೆಯ ದಿನವಾಗಿದೆ, ಶೋಷಿತ ಸಮುದಾಯಗಳಿಗೆ ಸದಾ ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ ಮಾರ್ಗದರ್ಶನ ನೀಡುವ ಗುರುಗಳು ಮನೆಗೆ ಬಂದು ಮತ್ತಷ್ಟು ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ, ಸಂತರ ಆಶೀರ್ವಾದ ಹೊಸ ಶಕ್ತಿ ನೀಡಿದೆ, ನನ್ನ ಪರವಾಗಿ ಧ್ವನಿಯೆತ್ತಲು ನಿರ್ಧರಿಸಿರುವ ಶ್ರೀಗಳ ನಿಲುವಿಗೆ ಅನಂತ ಭಕ್ತಿಪೂರ್ವಕ ಧನ್ಯವಾದ ಅರ್ಪಿಸುವೆ ಎಂದಿದ್ದಾರೆ.
ವಾಲ್ಮೀಕಿ ಸಮುದಾಯದ ಸಭೆ
ದೆಹಲಿ ಸಮಾವೇಶಕ್ಕೂ ಮುನ್ನ ತುಮಕೂರಿನ ಕೆಲವು ಸ್ಥಳಗಳಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರ ಸಭೆಗಳನ್ನು ರಾಜಣ್ಣ ಆಯೋಜಿಸಿದ್ದಾರೆ.
ಬಿಜೆಪಿಗೆ ಪರೋಕ್ಷ ಬೆಂಬಲ ನೀಡುತ್ತಿರುವ ಮತ್ತು ಓಲೈಸಿಕೊಳ್ಳಲು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಇಲ್ಲದ ಶಿಕ್ಷೆ ತಮಗೆ ಮಾತ್ರ ಏತಕ್ಕೆ ಎಂದು ರಾಜಣ್ಣ ಪಕ್ಷದ ವರಿಷ್ಠರನ್ನು ದೆಹಲಿಯಲ್ಲೇ ಪ್ರಶ್ನೆ ಮಾಡುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಂಡಿದ್ದಾರೆ.
ನನ್ನ ಹೇಳಿಕೆಯನ್ನು ಪೂರ್ಣವಾಗಿ ಅರಿಯದೆ, ಸಿದ್ದರಾಮಯ್ಯ ಸಂಪುಟದಿಂದ ವಜಾಗೊಳಿಸಿದಿರಿ, ಆದರೆ, ಶಿವಕುಮಾರ್ ವಿಧಾನಸಭಾ ಅಧಿವೇಶನದಲ್ಲೇ ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆ ಹಾಡಿದರು, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ದುಬೈನಲ್ಲಿ ಎರಡು ದಿನ ಕಾಯ್ದರು.
ಕೇಂದ್ರ ಸಚಿವರ ಜೊತೆ ವೇದಿಕೆ
ಬಿಜೆಪಿ ಬೆಂಬಲಿತ ಸಂಘ ಸಂಸ್ಥೆಗಳು ಏರ್ಪಡಿಸಿದ್ದ ಸಮಾರಂಭಗಳಲ್ಲಿ ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್ ಮತ್ತೆ ಕೆಲವು ಸಚಿವರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.
ಸಾರ್ವಜನಿಕವಾಗಿ ಇಷ್ಟೆಲ್ಲಾ ನಡೆದರೂ ಶಿವಕುಮಾರ್ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ, ಶಿಸ್ತುಕ್ರಮ ಜರುಗಿಸದಿದ್ದರೆ ನನ್ನನ್ನು ಮತ್ತೆ ಮಂತ್ರಿ ಮಾಡಿ ಎಂದು ಒತ್ತಾಯಿಸುವ ಜೊತೆಗೆ ಕೆಲವು ವರಿಷ್ಠ ಮುಖಂಡರನ್ನು ತರಾಟೆಗೆ ತೆಗೆದುಕೊಳ್ಳುವ ಉದ್ದೇಶದಿಂದಲೇ ಈ ಸಮಾವೇಶ ನಡೆಸುತ್ತಿದ್ದಾರೆ.
ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರುವವರೆಗೂ ವಾಲ್ಮೀಕಿ ಸಮುದಾಯ ನಿಮಗೆ ಬೇಕಿತ್ತು, ಅಧಿಕಾರಕ್ಕೆ ಬಂದ ನಂತರ (ಬಿ.ನಾಗೇಂದ್ರ, ಕೆ.ಎನ್.ರಾಜಣ್ಣ) ಕೈಬಿಟ್ಟರಿ.
15 ಎಸ್‌ಟಿ ಮೀಸಲು ಕ್ಷೇತ್ರ
ಕಳೆದ ವಿಧಾನಸಭಾ ಚುನಾವಣೆಯಲ್ಲಿ 15 ಎಸ್‌ಟಿ ಮೀಸಲು ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದಿದ್ದಾರೆ, ಅಲ್ಲದೆ, ಯಮಕನಮರಡಿ ಸಾಮಾನ್ಯ ಕ್ಷೇತ್ರದಲ್ಲೂ ನಮ್ಮ ಸಮುದಾಯದವರು ಆಯ್ಕೆಗೊಂಡಿದ್ದಾರೆ.
ಇಡೀ ಸಮುದಾಯ ಕಾಂಗ್ರೆಸ್ ಬೆಂಬಲಿಸಿದ್ದಕ್ಕೆ ನೀವು ನೀಡುತ್ತಿರುವ ಉಡುಗೊರೆ ಇದೇನೇ ಎಂದು ಪಕ್ಷದ ಅಧಿನಾಯಕ ರಾಹುಲ್ ಗಾಂಧಿಯನ್ನೇ ರಾಜಣ್ಣ ಪ್ರಶ್ನೆ ಮಾಡಲಿದ್ದಾರಂತೆ.
ಶಿವಕುಮಾರ್ ಗೆ ಎಐಸಿಸಿ ಬೆಂಬಲ
ಎಐಸಿಸಿಯ ಕೆಲವು ಮುಖಂಡರು ಶಿವಕುಮಾರ್ ಅವರನ್ನು ಬೆಂಬಲಿಸುವ ಏಕೈಕ ಉದ್ದೇಶದಿಂದ ಅವರನ್ನು ಪ್ರಶ್ನೆ ಮಾಡುವ ರಾಜ್ಯ ನಾಯಕರ ವಿರುದ್ಧ ಹೇಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಬಿಚ್ಚಿಡಲಿದ್ದಾರಂತೆ.
ರಾಜಣ್ಣ ಅವರ ಸಮಾವೇಶದ ಸಿದ್ಧತೆಗೆ ಸಿದ್ದರಾಮಯ್ಯ ಸಂಪುಟದ ಕೆಲವು ಸಚಿವರು ಪರೋಕ್ಷವಾಗಿ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

