ಮೈಸೂರು:ಧರ್ಮಸ್ಥಳಕ್ಕೆ ಬಿಜೆಪಿ ಕೈಗೊಂಡಿರುವುದು ಧರ್ಮ ಯಾತ್ರೆಯಲ್ಲ ರಾಜಕೀಯ ಯಾತ್ರೆ, ಇದಕ್ಕೆ ಹೊರದೇಶಗಳಿಂದ ಹಣ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಯುತ್ತಿದೆ, ಬಿಜೆಪಿ ಎನ್‌ಐಎ ತನಿಖೆಗೆ ಒತ್ತಾಯಿಸುತ್ತಿದೆ, ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದರು.
ಎನ್‌ಐಎ ತನಿಖೆ
ಎಸ್‌ಐಟಿ ರಚನೆ ವೇಳೆ ಎನ್‌ಐಎ ತನಿಖೆ ಮಾಡಿ ಎನ್ನಲಿಲ್ಲ, ಮೃತದೇಹಗಳು ಸಿಗದಿದ್ದಾಗ ಒತ್ತಾಯಿಸುತ್ತಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಸತ್ಯ ಹೊರಬರಲಿ ಎಂದು ಎಸ್‌ಐಟಿ ರಚನೆ ಸ್ವಾಗತಿಸಿದ್ದಾರೆ, ನಮ್ಮ ಮೇಲಿನ ಅನುಮಾನದ ತೂಗುಗತ್ತಿ ನಿವಾರಣೆಯಾಗಲು ಸತ್ಯ ಹೊರಬರಬೇಕು.
ಎಸ್‌ಐಟಿ ತನಿಖೆಯಲ್ಲಿ ನಾವ್ಯಾರು ಹಸ್ತಕ್ಷೇಪ ಮಾಡಿಲ್ಲ, ಎಲ್ಲಾ ವಿಷಯಗಳಲ್ಲೂ ರಾಜಕೀಯ ಬಳಸಬಾರದು ಎಂದರು.
ಬಿಜೆಪಿ ಯಾರ ಪರ
ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆ ಮೇಲೆ ಆರೋಪವಿದೆ, ಬಿಜೆಪಿ ಯಾರ ಪರ ಇದ್ದಾರೆ, ಒಂದು ಕಡೆ ವೀರೇಂದ್ರ ಹೆಗ್ಗಡೆ ಅವರಿಗೆ ಜೈಕಾರ ಹಾಕುತ್ತಾರೆ, ಮತ್ತೊಂದು ಕಡೆ ಸೌಜನ್ಯ ಪರ ಮಾತನಾಡುತ್ತಾರೆ, ನಿಜವಾಗಿಯೂ ಯಾರ ಪರ ಇದ್ದಾರೆ ಎಂದು ಪ್ರಶ್ನಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಸುನೀಲ್ ಕುಮಾರ್ ವಿಧಾನಸಭೆಯಲ್ಲಿ ಬೇರೆಯೇ ಚರ್ಚೆ ಮಾಡಿದ್ದರು, ಈಗ ಬೇರೆ ಹೇಳುತ್ತಿದ್ದಾರೆ, ದಿನಕ್ಕೊಂದು ಹೇಳಿಕೆ ಕೊಡಬಾರದು, ಅಸತ್ಯದ ಮೇಲೆ ಚರ್ಚೆ ಮಾಡಿದರೆ ಹೀಗೆ ಆಗುವುದು ಎಂದರು.
ಸೌಜನ್ಯ ಪ್ರಕರಣದ ಮರು ತನಿಖೆ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ, ಈ ಬಗ್ಗೆ ಸೌಜನ್ಯ ತಾಯಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು.
ಬಾನು ಕನ್ನಡ ಬರಹಗಾರ್ತಿ
2017ರಲ್ಲಿ ಕವಿ ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿದ್ದರು ಆಗ ಇವರೆಲ್ಲ ಎಲ್ಲಿ ಹೋಗಿದ್ದರು, ಲೇಖಕಿ ಬಾನು ಮುಸ್ತಾಕ್ ಕುಂಕುಮದ ಬಗ್ಗೆ ಮಾತನಾಡಿರುವುದು ನನಗೆ ತಿಳಿದಿಲ್ಲ, ಅವರು ಕನ್ನಡದ ಬರಹಗಾರ್ತಿ, ಕನ್ನಡದ ಮೇಲೆ ಅಭಿಮಾನ, ಪ್ರೀತಿ ಇಲ್ಲದೆ ಬರೆಯಲು ಸಾಧ್ಯವೇ.
ಬಾನು ಮುಷ್ತಾಕ್ ಮುಸ್ಲಿಂ ಮಹಿಳೆ ಕುಂಕುಮ ಹಚ್ಚಿಕೊಂಡು ಉದ್ಘಾಟನೆಗೆ ಬನ್ನಿ ಎನ್ನುವುದು ತರವಲ್ಲ, ಮುಸ್ಲಿಂ ಗುರುಗಳು ಅವರ ವಿರುದ್ಧ ಫತ್ವಾ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.

