ಬೆಂಗಳೂರು:ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತಪತ್ರ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ, ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬಂತೆ ಬಿಜೆಪಿ ಏಕೆ ಗಾಬರಿಯಾಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆ ಸರ್ಕಾರದ ತೀರ್ಮಾನ, ಬಿಜೆಪಿಗೆ ಆತಂಕವೇಕೆ, ರಾಜ್ಯ ಸರ್ಕಾರಕ್ಕೆ ಅವಕಾಶವಿದೆ, ಬಿಜೆಪಿ ಅವಧಿಯಲ್ಲಿ ಮಾಡಿರುವ ಕಾನೂನು ಇದೆ.
ಸಹಕಾರಿ ಸಂಘಗಳಂತೆ ಚುನಾವಣೆ
ಲೋಕಸಭಾ ಚುನಾವಣೆಗಳ ಪ್ರಕ್ರಿಯೆಗಳನ್ನು ಪರಿಶೀಲನೆ ಮಾಡಿದ್ದೇವೆ, ಸಹಕಾರಿ ಸಂಘಗಳಿಗೆ ಚುನಾವಣೆ ನಡೆಸುವಂತೆ ಸ್ಥಳೀಯ ಸಂಸ್ಥೆ ಚುನಾವಣೆಯನ್ನೂ ಮಾಡುತ್ತೇವೆ, ಕೇಂದ್ರ ಚುನಾವಣಾ ಆಯೋಗದ ತೀರ್ಮಾನದಂತೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಯುತ್ತದೆ ಎಂದರು.
ಜಿಬಿಐಟಿ ಯೋಜನೆಗೆ ಶೇ.82ರಷ್ಟು ರೈತರು ಜಮೀನು ನೀಡಲು ಒಪ್ಪಿಗೆ ಸೂಚಿಸಿದ್ದಾರೆ, ಉಳಿದ ಶೇ.18 ಕೃಷಿಕರು ವಿರೋಧ ಮಾಡುತ್ತಿದ್ದಾರೆ, ನಮ್ಮ ರೈತರಿಗೆ ಅತ್ಯುತ್ತಮ ಪರಿಹಾರ ನೀಡಿದ್ದೇವೆ.
ಇಡೀ ರಾಜ್ಯವನ್ನು ಗಮನದಲ್ಲಿ ಇಟ್ಟುಕೊಂಡು ಪರಿಹಾರ ರೂಪಿಸಬೇಕಿದೆ, ಹೆಚ್ಚಿನ ಪರಿಹಾರ ಮೊತ್ತ ನೀಡಲು ಸಾಧ್ಯವಿಲ್ಲ, ಯೋಜನೆ ಬೇಡವಾಗಿದ್ದರೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ತಮ್ಮ ಸರ್ಕಾರದ ಅವಧಿಯಲ್ಲಿ ಡಿನೋಟಿಫಿಕೇಷನ್ ಮಾಡಬಹುದಿತ್ತಲ್ಲ.
ಡಿನೋಟಿಫಿಕೇಷನ್ ಮಾಡಲಾಗದು
ಈ ಯೋಜನೆ ನೋಟಿಫಿಕೇಶನ್ ಮಾಡಿದ್ದು ಅವರು, ಸುಪ್ರೀಂಕೋರ್ಟ್‌ನಲ್ಲಿ ಅಂತಿಮ ತೀರ್ಮಾನ ಆಗುವವರೆಗೆ ಡಿನೋಟಿಫಿಕೇಷನ್ ಮಾಡಲಾಗದು.
ಬಿಜೆಪಿ ಹಾಗೂ ಕಾಂಗ್ರೆಸ್ಸಿಗರ ಮೇಲಿದ್ದ ಅನೇಕ ಮೊಕದ್ದಮೆಗಳನ್ನು ಹಿಂಪಡೆದಿದ್ದೇವೆ, ಬಿಜೆಪಿ ಸರ್ಕಾರ ನಮ್ಮ ಬೆಂಬಲಿಗರ ಮೇಲೆ ಬಲವಂತವಾಗಿ ಹಾಕಿದ್ದ ಪ್ರಕರಣಗಳನ್ನು ರದ್ದುಗೊಳಿಸಿದ್ದೇವೆ, ಕೋವಿಡ್ ಸಮಯದಲ್ಲಿ ನನ್ನ ಹಾಗೂ ಮುಖ್ಯಮಂತ್ರಿ ವಿರುದ್ಧ ಕೇಸ್ ಹಾಕಿದ್ದರು, ರಾಜ್ಯ, ರೈತ ಮತ್ತು ಭಾಷೆಗಾಗಿ ಪ್ರತಿಭಟನೆ ನಡೆಸಿದವರ ಮೇಲೆ ಹಾಕಿರುವ ಕೇಸ್‌ಗಳನ್ನು ಹಿಂಪಡೆದಿದ್ದೇವೆ.
ಎಲ್ಲಾ ಕೇಸ್ ರದ್ದು
ರೈತ ಸಂಘ, ಬಿಜೆಪಿ, ಚಳವಳಿಗಾರರ ಮನವಿ ಸ್ವೀಕರಿಸಿ ಎಲ್ಲಾ ಪಕ್ಷದವರ ಮೇಲಿದ್ದ ಕೇಸ್ ರದ್ದುಗೊಳಿಸಿದ್ದೇವೆ ಎಂದರು.
ನನ್ನ ಬಂಧನವಾಗಿದ್ದ ಜಾರಿ ನಿರ್ದೇಶನಾಲಯ (ಇ.ಡಿ.) ಪ್ರಕರಣ ವಜಾಗೊಂಡಿದೆ, ನನಗೆ ಆಗಿರುವ ಅನ್ಯಾಯ ಸರಿ ಮಾಡುವವರು ಯಾರು, ಈ ವಿಚಾರವಾಗಿ ಹೆಚ್ಚಿನ ಚರ್ಚೆ ಬೇಡ ಎಂದರು.

