ಬೆಂಗಳೂರು:ಮಧ್ಯಮ ವರ್ಗದವರು ನಿರ್ಮಿಸುವ ಕಟ್ಟಡಗಳಿಗೆ ಸ್ವಾಧೀನ ಪ್ರಮಾಣಪತ್ರ (ಪೊಸೆಷನ್ ಸರ್ಟಿಫಿಕೇಟ್-ಪಿ.ಸಿ.) ಪಡೆಯುವುದರಿಂದ ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ.
ಉತ್ತರ ಪ್ರದೇಶದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಟಾನಗೊಳಿಸಲಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 4 ಲಕ್ಷ ಮನೆಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಸ್ವಾಧೀನ ಪ್ರಮಾಣಪತ್ರ ದೊರೆಯದೆ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಲ್ಲ.
ತಾತ್ಕಾಲಿಕ ಸಂಪರ್ಕ
ಇವರೆಲ್ಲರೂ ತಮ್ಮ ನಿವೇಶನಗಳಲ್ಲಿ ಮನೆ ಕಟ್ಟವ ಮುನ್ನ ಸ್ಥಳೀಯ ಸಂಸ್ಥೆಗಳಿಂದ ನಕ್ಷೆ ಅನುಮೋದನೆ ಪ್ರಮಾಣಪತ್ರ (ಕನ್ಟ್ರಕ್ಷನ್‌ಪ್ಲ್ಯಾನ್ ಸರ್ಟಿಫಿಕೇಟ್-ಸಿ.ಸಿ.) ಪಡೆದು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ.
ಅನುಮೋದನೆಗೊಂಡ ನಕ್ಷೆಯಂತೆ ಮನೆಗಳನ್ನು ನಿರ್ಮಾಣ ಮಾಡದಿರುವವರಿಗೆ ಸ್ಥಳೀಯ ಸಂಸ್ಥೆಗಳು ಸ್ವಾಧೀನ ಪ್ರಮಾಣಪತ್ರ ನೀಡುತ್ತಿಲ್ಲ.
ಪಿ.ಸಿ. ಇಲ್ಲದೆ ವಿದ್ಯುತ್ ಹಾಗೂ ನೀರಿನ ಸಂಪರ್ಕಗಳನ್ನು ಆಯಾ ಸಂಸ್ಥೆಗಳು ನೀಡದಿರುವುದರಿಂದ 4 ಲಕ್ಷ ಮನೆಗಳ ಮಾಲಿಕರು ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ.
ವಾಣಿಜ್ಯ ಸಂಪರ್ಕ
ಕೆಲವರು ವಾಣಿಜ್ಯ ಸಂಪರ್ಕದಲ್ಲೇ ಮುಂದುವರೆದಿದ್ದರೆ, ಮತ್ತೆ ಕೆಲವರು ಮನೆ ಕಟ್ಟಿ ಪ್ರವೇಶ ಮಾಡದಿರುವ ಪರಿಸ್ಥಿತಿಯಲ್ಲಿದ್ದಾರೆ.
ವಿಧಾನಮಂಡಲ ಅಧಿವೇಶನದಲ್ಲಿ ಶಾಸಕರು ಪಕ್ಷಾತೀತವಾಗಿ ಮಧ್ಯಮ ವರ್ಗದವರು ಕಟ್ಟಿದ ಮನೆಗಳಿಗೆ ಪಿ.ಸಿ. ನೀಡುವಂತೆ ಆಗ್ರಹಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕಾನೂನು ಪರಿಶೀಲಿಸಿ, ಮಧ್ಯಮ ವರ್ಗದವರಿಗೆ ಅವಕಾಶ ನೀಡುವ ಬಗ್ಗೆ ಭರವಸೆ ನೀಡಿದ್ದರು.
ಷರತ್ತುಬದ್ಧ ಪಿ.ಸಿ.
20×30 ಹಾಗೂ 30×40 ನಿವೇಶನಗಳಲ್ಲಿ ಮನೆ ನಿರ್ಮಿಸಿರುವವರಿಗೆ ಷರತ್ತುಬದ್ಧ ಪಿ.ಸಿ. ನೀಡಲು ಸರ್ಕಾರ ನಿರ್ಧರಿಸಿದೆ.
ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲೇ ಈ ವಿಷಯ ಮಂಡನೆ ಆಗಿದ್ದರೂ, ಕೆಲವು ಸಚಿವರು 60×40 ಚದರಡಿ ನಿವೇಶನಗಳಲ್ಲಿ ಮನೆ ನಿರ್ಮಿಸಿದವರಿಗೂ ಅನುಮತಿ ನೀಡಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.
ಇದರ ಹಿನ್ನೆಲೆಯಲ್ಲಿ ಚರ್ಚೆ ಅಪೂರ್ಣಗೊಂಡಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪಿ.ಸಿ. ನೀಡುವ ಬಗ್ಗೆ ಸರ್ಕಾರ ಮಹತ್ವದ ತೀರ್ಮಾನ ಪ್ರಕಟಿಸಲಿದೆ.
ಸುಪ್ರೀಂಕೋರ್ಟ್‌ಗೆ ಅರ್ಜಿ
ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ನಕ್ಷೆ ಉಲ್ಲಂಘಿಸಿ ಮನೆಗಳನ್ನು ನಿರ್ಮಿಸಿದವರಿಗೆ ಸ್ಥಳೀಯ ಸಂಸ್ಥೆಗಳು ಓ.ಸಿ. ನೀಡಬಾರದೆಂದು ಮನವಿ ಮಾಡಿದ್ದರು.
ಅರ್ಜಿ ಪುರಸ್ಕರಿಸಿದ ನ್ಯಾಯಾಲಯ, ನಕ್ಷೆಗೆ ಅನುಗುಣವಾಗಿ ಮನೆ ನಿರ್ಮಿಸದವರಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸಬಾರದೆಂದು ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿತ್ತು.
ಈ ಆದೇಶವನ್ನೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ನಿಗಮಗಳಿಗೆ ಆದೇಶಿಸಿ, ಸ್ಥಳೀಯ ಸಂಸ್ಥೆಗಳಿಂದ ಪಿ.ಸಿ. ಪಡೆಯದೆ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬಾರದೆಂದು ಸೂಚಿಸಿದೆ.
ಕೆಇಆರ್‌ಸಿ ತೀರ್ಮಾನ
ಕೆಇಆರ್‌ಸಿ ತೀರ್ಮಾನವನ್ನೇ ಜಲ ಮಂಡಳಿಯೂ ತೆಗೆದುಕೊಂಡಿದ್ದರಿಂದ ಸ್ಥಳೀಯ ಸಂಸ್ಥೆಗಳು ನಕ್ಷೆ ಉಲ್ಲಂಘಿಸಿ ಕಟ್ಟಿರುವ ಮನೆಗಳಿಗೆ ಪಿ.ಸಿ. ನೀಡಿಲ್ಲ.
ಇದೀಗ ಸರ್ಕಾರ ಮಧ್ಯಮ ವರ್ಗದವರು ನಿರ್ಮಿಸುವ ಮನೆಗಳಿಗೆ ಪಿ.ಸಿ. ಕಡ್ಡಾಯ ಅಲ್ಲ ಎಂಬ ಕಾನೂನು ತರಲು ಮುಂದಾಗಿದೆ.

