ಬೆಂಗಳೂರು:ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ನಿಯೋಗ ಜಪಾನ್‌ಗೆ ತೆರಳಿದ್ದು ಹಲವು ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ.
ಹುಬ್ಬಳ್ಳಿಯ ಪ್ರತಿಷ್ಠಿತ ಎನ್‌ಜಿಇಎಫ್ ಕಾರ್ಖಾನೆ ಪುನಃಶ್ಚೇತನ ಸಾಧ್ಯತೆಗಳ ಕುರಿತು ಜಪಾನ್‌ನ ವಿವಿಧ ಕಂಪನಿಗಳ ಜೊತೆ ಹೂಡಿಕೆಯ ಒಡಂಬಡಿಕೆ ಕುರಿತು ಚರ್ಚಿಸಲಿದೆ ಎಂದು ಸಚಿವಾಲಯ ಪ್ರಕಟಣೆ ತಿಳಿಸಿದೆ.
ಜೆಎಫ್‌ಇ ಷೋಜಿ
ಕರ್ನಾಟಕದಲ್ಲಿ ಹೂಡಿಕೆ ಸಂಬಂಧ ಜೆಎಫ್‌ಇ ಷೋಜಿ ಕಂಪನಿ ಜೊತೆ ಮಾತುಕತೆ ನಡೆಸಿದ ನಿಯೋಗ ಅಧ್ಯಯನಕ್ಕೆ ಬರುವಂತೆ ಕಾರ್ಖಾನೆಗೆ ಆಹ್ವಾನ ನೀಡಿದ್ದಾರೆ.
ಸಚಿವರ ನೇತೃತ್ವದ ರಾಜ್ಯದ ಉನ್ನತ ಮಟ್ಟದ ನಿಯೋಗ ಜಪಾನ್‌ನ ವಿವಿಧ ಕಂಪನಿಗಳ ಉನ್ನತಾಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದರು.
ಹುಬ್ಬಳ್ಳಿ ಎನ್‌ಜಿಇಎಫ್ ಪುನಃಶ್ಚೇತನಕ್ಕೆ ಸಂಬಂಧಿಸಿದಂತೆ ಘಟಕಕ್ಕೆ ಭೇಟಿ ನೀಡಲು ಜೆಎಫ್‌ಇ ಕಂಪನಿಯ ಉನ್ನತಾಧಿಕಾರಿಗಳಿಗೆ ಆಹ್ವಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ವಿದ್ಯುತ್ ಪರಿವರ್ತಕ
ವಿದ್ಯುತ್ ಪರಿವರ್ತಕಗಳ ತಯಾರಿಕೆಯಲ್ಲಿ ಜೆಎಫ್‌ಇ ಮುಂಚೂಣಿಯಲ್ಲಿದೆ, ಹುಬ್ಬಳ್ಳಿಯಲ್ಲಿನ ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ಯಮ ನ್ಯೂಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ (ಎನ್‌ಜಿಇಎಫ್)ಯನ್ನು ಸರ್ಕಾರದ ಪಾಲುದಾರಿಕೆಯಡಿ ಪುನಃಶ್ಚೇತನ ಸಂಬಂಧ ಪೂರ್ವಭಾವಿ ಮಾತುಕತೆ ನಡೆಸಲಾಗುತ್ತಿದೆ.
ಜೆಎಫ್‌ಇ ಷೋಜಿ ಕಂಪನಿ ಯಂತ್ರೋಪಕರಣಗಳ ವಿಭಾಗದ ಪ್ರಧಾನ ವ್ಯವಸ್ಥಾಪಕ ಹಿರೋಶಿ ಲಿಜಿಮಾ, ಎಲೆಕ್ಟ್ರಿಕಲ್ ಅಪ್ಲೈಯನ್ಸಸ್ ಸ್ಟೀಲ್ ಪ್ಲ್ಯಾನಿಂಗ್ ವಿಭಾಗದ ವ್ಯವಸ್ಥಾಪಕ ಹಿಡೆಕಸು ಯೋಶಿಒಕೊ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಬ್ಯಾಟರಿ ಚಾಲಿತ ವಾಹನಗಳು (ಬಿಇವಿ) ಮತ್ತು ವಿದ್ಯುತ್ ಚಾಲಿತ ವಾಹನಗಳ (ಇವಿ) ತಯಾರಿಕೆಯಲ್ಲಿ ಬಳಸುವ ಮೋಟರ್ ಕೋರ್ಸ್ ತಯಾರಿಸುವ 400 ಕೋಟಿ ರೂ. ವೆಚ್ಚದ ಯೋಜನೆ ಪ್ರಾರಂಭಿಸುವುದಾಗಿ ರಾಜ್ಯ ನಿಯೋಗಕ್ಕೆ ಕಂಪನಿ ಭರವಸೆ ನೀಡಿದೆ.
ಹಲವು ಕಂಪನಿಗಳ ಜೊತೆ ಚರ್ಚೆ
ಜಪಾನ್ ಭೇಟಿ ವೇಳೆ ರಾಜ್ಯ ನಿಯೋಗ ಸುಮಿಟೊಮೊ, ಯಸ್ಕಾವಾ, ಜೆಎಫ್‌ಇ ಷೋಜಿ ಕಂಪನಿಗಳ ಉನ್ನತಾಧಿಕಾರಿಗಳ ಜೊತೆಯೂ ಮಾತುಕತೆ ನಡೆಸಿದೆ.
ಕೊಪ್ಪಳದ ಉಕ್ಕು ತಯಾರಿಕಾ ಘಟಕದಲ್ಲಿ 2,345 ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಸುಮಿಟೊಮೊ ಖಚಿತಪಡಿಸಿದ್ದು, ಘಟಕವು 2028ರ ವೇಳೆಗೆ ಕಾರ್ಯಾರಂಭ ಮಾಡಲಿದೆ.
ವಾರ್ಷಿಕ 3,50,000 ಟನ್ ಕಬ್ಬಿಣ ಮತ್ತು ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿದ್ದು, ರಾಜ್ಯದಲ್ಲಿ ಬಯೊಮಾಸ್ ಘಟಕ ಸ್ಥಾಪಿಸುವ ಬಗ್ಗೆಯೂ ಸುಮಿಟೊಮೊ ಆಸಕ್ತಿ ವ್ಯಕ್ತಪಡಿಸಿದೆ ಎಂದು ಸಚಿವರು ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ ಘಟಕ
ಬೆಂಗಳೂರಿನಲ್ಲಿ ಮೋಷನ್ ಕಂಟ್ರೋಲ್ ಮತ್ತು ವೇರಿಯೇಬಲ್ ಫ್ರಿಕ್ವೆನ್ಸಿ ಡ್ರೈವ್ಸ್ ಘಟಕ ಸ್ಥಾಪಿಸುವ ಸಂಬಂಧ ಬಂಡವಾಳ ಹೂಡಿಕೆಯನ್ನು ಯಸ್ಕಾವಾ ಕಂಪನಿ ರಾಜ್ಯದ ನಿಯೋಗಕ್ಕೆ ಖಚಿತಪಡಿಸಿದ್ದು, ಅತ್ಯಾಧುನಿಕ ತಯಾರಿಕಾ ತಂತ್ರಜ್ಞಾನ ಕೇಂದ್ರವಾಗಿ ಬೆಳೆಯುವ ಕರ್ನಾಟಕದ ಸ್ಥಾನವನ್ನು ಬಲಪಡಿಸಲಿದೆ ಎಂದರು.
ಉನ್ನತಮಟ್ಟದ ನಿಯೋಗದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್‌ಸೆಲ್ವಕುಮಾರ್, ಆಯುಕ್ತ ಗುಂಜನ್ ಕೃಷ್ಣ ಇದ್ದಾರೆ.

