ಬೆಂಗಳೂರು:ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ಗುಂಡಿಯೂರು ಎಂಬ ಕುಖ್ಯಾತಿ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಗರಕ್ಕೆ ಕುಖ್ಯಾತಿ ತಂದ ಅಪಮಾನಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೊಣೆಗಾರರು, ಬೆಂಗಳೂರು ಅಲ್ಲದೆ, ಇಡೀ ಕರ್ನಾಟಕ ಅದಕ್ಷ ಹಾಗೂ ಭ್ರಷ್ಟರ ಕೈಯ್ಯಲ್ಲಿ ಸಿಕ್ಕಿ ನರಳುತ್ತಿದೆ ಎಂದಿದ್ದಾರೆ.
ಪಂಚೇಂದ್ರಿಯಗಳು ನಿಷ್ಕ್ರಿಯ
ಬಹುರಾಷ್ಟ್ರೀಯ ಕಂಪನಿಗಳು ಭರವಸೆ ಕಳೆದುಕೊಂಡು ನೆರೆ ರಾಜ್ಯಗಳತ್ತ ವಲಸೆ ಹೋಗುತ್ತಿವೆ, ಭಂಡ ಸರ್ಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ.
ಕಂಪನಿಗಳು ಬೆಂಗಳೂರು ಬಿಡುವುದು ಬೇಡ, ಎಲ್ಲರೂ ಸೇರಿ ಎಮ್ಮೆ ಚರ್ಮದ ಸರ್ಕಾರಕ್ಕೆ ಪಾಠ ಕಲಿಸೋಣ, ನಿಮ್ಮ ಜತೆ ನಾವು ಮತ್ತು ಕರ್ನಾಟಕದ ಜನತೆ ಇದ್ದೇವೆ.
ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಸಾವಿನ ಗುಂಡಿ, ಕಂಡೆಲ್ಲೆಲ್ಲ ಕಸದ ರಾಶಿ, ಗ್ರೇಟರ್ ಬೆಂಗಳೂರು ಎಂದರೆ ಇದೇನಾ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಏನು ಮಾಡುತ್ತಿದೆ, ಜನರ ತೆರಿಗೆ ದುಡ್ಡು ನುಂಗಿ ಗೊರಕೆ ಹೊಡೆಯುತ್ತಿದೆಯೇ.
ಆತ್ಮಾಭಿಮಾನ ಇಲ್ಲದ ಸರ್ಕಾರ
ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ, ಎಳ್ಳಷ್ಟೂ ಸಂಕೋಚ, ಆತ್ಮಾಭಿಮಾನ ಇಲ್ಲದ ಸರ್ಕಾರ, ಕನ್ನಡಿಗರ ಸ್ವಾಭಿಮಾನ ಗುಂಡಿಪಾಲು ಮಾಡಿದೆ.
ತೆರಿಗೆ ಹಾಕುವುದರಲ್ಲಿ ರಾಕೆಟ್ ವೇಗದ ಸರ್ಕಾರಕ್ಕೆ ಗುಂಡಿ ಮುಚ್ಚುವುದರಲ್ಲಿ ಆಮೆ ವೇಗವೂ ಇಲ್ಲ, ಕೊಳ್ಳೆ ಹೊಡೆಯುವುದರಲ್ಲಿ ಉನ್ಮಾದ, ಅಭಿವೃದ್ಧಿಯತ್ತ ತೀವ್ರ ಉಪೇಕ್ಷೆ, ಗ್ಯಾರಂಟಿಗಳಿಗಾಗಿ ರಾಜ್ಯದ ಅಭಿವೃದ್ಧಿ ಬಲಿಯಾಗಿ ಗ್ರೇಟರ್ ಬೆಂಗಳೂರು ಗಬ್ಬೆದ್ದು ನಾರುತ್ತಿದೆ.
ಗುಂಡಿ ಮುಚ್ಚುವುದಕ್ಕೆ ಬಿಡಿಗಾಸಿಲ್ಲದ ಸರ್ಕಾರ ಜನರಿಂದ ಕಿತ್ತುಕೊಳ್ಳುತ್ತಿರುವ ತೆರಿಗೆ ಹಣ ಏನು ಮಾಡುತ್ತಿದೆ, ಯಾರ ಕಿಸೆ ಸೇರುತ್ತಿದೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

