ಬೆಂಗಳೂರು:ರಾಜಕೀಯ ವೈರತ್ವ ಬಿಟ್ಟು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ನಡೆಸುತ್ತಿರುವ ಜಾತಿಗಣತಿ ಬಗ್ಗೆ ಚರ್ಚಿಸಲು ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಚಿವರು, ಶಾಸಕರು, ಸಂಸದರು ಹಾಗೂ ಮುಖಂಡರ ಸಭೆಯನ್ನು ಆದಿಚುಂಚನಗಿರಿ ಮಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಆಯೋಜಿಸಿದ್ದರು.
ಆದಿಚುಂಚನಗಿರಿ ಸ್ವಾಮೀಜಿ ಕರೆದ ಸಭೆ
ಸ್ವಾಮೀಜಿ ಕರೆದ ಸಭೆಗೆ ಕುಮಾರಸ್ವಾಮಿ, ಶಿವಕುಮಾರ್ ಅಲ್ಲದೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಚಿವರಾದ ಚಲುವರಾಯಸ್ವಾಮಿ, ಡಾ.ಸುಧಾಕರ್ ಸೇರಿದಂತೆ ಸಮಾಜದ ಬಹುತೇಕ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಅನಾರೋಗ್ಯ ಕಾರಣದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಭೆಗೆ ಹಾಜರಾಗಿರಲಿಲ್ಲ.
ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರಾದ ಕೃಷ್ಣಬೈರೇಗೌಡ ಹಾಗೂ ಕೆ.ವೆಂಕಟೇಶ್ ಅವರುಗಳೂ ಮಠದ ಸಭೆಗೆ ಗೈರುಹಾಜರಾಗಿದ್ದರು.
ಮುಖ ಕೊಟ್ಟು ನೋಡಲಿಲ್ಲ
ಸಭೆಯಲ್ಲಿ ಭಾಗಿಯಾಗಿದ್ದರೂ ಕುಮಾರಸ್ವಾಮಿ ಹಾಗೂ ಶಿವಕುಮಾರ್ ಒಬ್ಬರೊನ್ನೊಬ್ಬರು ಮುಖ ಕೊಟ್ಟು ನೋಡುವ, ಇಲ್ಲವೇ ಮಾತನಾಡಿಸುವ ಗೋಜಿಗೆ ಹೋಗಲಿಲ್ಲ.
ಸ್ವಾಮೀಜಿ ಬಲಭಾಗದಲ್ಲಿ ಕುಮಾರಸ್ವಾಮಿ, ಸದಾನಂದಗೌಡ, ಅಶೋಕ್, ಅಶ್ವತ್ಥನಾರಾಯಣ, ನಿಖಿಲ್ ಕುಮಾರಸ್ವಾಮಿ ಕುಳಿತಿದ್ದರೆ, ಸ್ವಾಮೀಜಿ ಎಡಭಾಗದಲ್ಲಿ ಶಿವಕುಮಾರ್, ಚಲುವರಾಯಸ್ವಾಮಿ, ಡಾ.ಸುಧಾಕರ್ ಕುಳಿತಿದ್ದರು.

