ಬೆಂಗಳೂರು:ಪ್ರಧಾನಮಂತ್ರಿ ನರೇಂದ್ರ ಮೋದಿ ನಿವಾಸದ ರಸ್ತೆಯೂ ಸೇರಿದಂತೆ ಇಡೀ ರಾಷ್ಟ್ರವೇ ಗುಂಡಿಗಳಿಂದ ಕೂಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಖಾರವಾಗಿ ನುಡಿದಿದ್ದಾರೆ.
ಪಾಟ್ನಾಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ರಸ್ತೆಗುಂಡಿಗಳ ಸಮಸ್ಯೆ ಇದೆ, ಕೇವಲ ಕರ್ನಾಟಕದ ಬಗ್ಗೆ ಮಾತ್ರ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದರು.
ಎಲ್ಲ ಕಡೆ ಗುಂಡಿಗಳಿವೆ
ಐಟಿ-ಬಿಟಿ ಕಂಪನಿಗಳು ಸೇರಿದಂತೆ ಎಲ್ಲರಿಗೂ ಹೇಳಬಯಸುವುದೇನೆಂದರೆ, ಎಲ್ಲ ಕಡೆ ಗುಂಡಿಗಳಿವೆ, ನಾವು ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದೇವೆ.
ದೆಹಲಿಯಿಂದ ನಿನ್ನೆಯಷ್ಟೇ ಹಿಂತಿರುಗಿದ್ದೇನೆ, ಅಲ್ಲಿನ ರಸ್ತೆ ಸ್ವಚ್ಛತೆ ಬಗ್ಗೆ ಅರಿಯುವ ಉದ್ದೇಶದಿಂದ ಪ್ರಧಾನಿ ವಾಸವಿರುವ ರಸ್ತೆ ಸೇರಿದಂತೆ ಎಲ್ಲಡೆ ಭೇಟಿ ನೀಡಿದೆ, ಎಲ್ಲವೂ ಗುಂಡಿಮಯ.
ಮಳೆಯಿಂದ ನಮ್ಮಲ್ಲಿಯೂ ಗುಂಡಿಗಳಾಗಿವೆ, ನಾನು ಅದನ್ನು ಅಲ್ಲಗಳೆಯುವುದಿಲ್ಲ, ಪಾಲಿಕೆವಾರು 200 ಗುಂಡಿಗಳಂತೆ ಪ್ರತಿದಿನ ಒಂದು ಸಾವಿರ ಗುಂಡಿಗಳನ್ನು ಬೆಂಗಳೂರಿನಾದ್ಯಂತ ಮುಚ್ಚಲಾಗುತ್ತಿದೆ.

ಗುಂಡಿ ಮುಚ್ಚುವ ಕೆಲಸ
ಇದು ರಾಜಧಾನಿಗಷ್ಟೇ ಸೀಮಿತವಾಗಿಲ್ಲ, ರಾಜ್ಯದ ವಿವಿಧ ಭಾಗಗಳಲ್ಲಿಯೂ ಮಳೆ ನಡುವೆಯೂ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ ಎಂದರು.
ಕೆಲವು ಉದ್ದಿಮೆದಾರರು ಟ್ವೀಟ್ ಮೂಲಕ ಕಣ್ತೆರೆಸುವ ಕೆಲಸ ಮಾಡಿದ್ದಾರೆ, ನಮ್ಮ ಇಲಾಖೆಯೂ ಕೆಲಸ ಮಾಡುತ್ತಿದೆ, ಆದರೆ, ಕೆಲವರು ಇದನ್ನೇ ವೈಭವೀಕರಿಸಿ ಅಪಪ್ರಚಾರ ಮಾಡುತ್ತಿದ್ದಾರೆಂದು ದೂರಿದರು.
ಬಿಜೆಪಿ ಕಾಲದಿಂದ ರಸ್ತೆಗಳ ನಿರ್ವಹಣೆ ಚೆನ್ನಾಗಿ ಮಾಡಿದ್ದರೆ, ಇಂತಹ ಪರಿಸ್ಥಿತಿ ಏಕೆ ಬರುತ್ತಿತ್ತು ಎಂದು ಪ್ರಶ್ನಿಸಿದರು.
ಚುನಾವಣೆ ಹಿನ್ನೆಲೆ ಆರೋಪ
ಅವರುಗಳು ಯಾರೂ ಮಾಡಲಿಲ್ಲ, ಈಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರ ಬರುತ್ತಿವೆ ಎಂಬುದನ್ನು ಕಂಡುಕೊಂಡು ಈ ಆರೋಪ ಮಾಡುತ್ತಿದ್ದಾರೆ ಎಂದರು.
ಬಿಹಾರದ ಪಾಟ್ನಾದಲ್ಲಿ ನಾಳೆ ನಡೆಯಲಿರುವ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಪಾಲ್ಗೊಳ್ಳಲು ಇಂದೇ ತೆರಳುತ್ತಿದ್ದೇನೆ.
ಬುಧವಾರದ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ಸದಸ್ಯರು ಆಗಮಿಸಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪಕ್ಷದ ಎಲ್ಲಾ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.

