ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗುಂಡಿ ಭಾಗ್ಯ ಯೋಜನೆ ವಿರುದ್ಧ ರಾಜ್ಯ ಬಿಜೆಪಿ ಇಂದು ಬೃಹತ್ ಪ್ರತಿಭಟನೆ ನಡೆಸಿತು.
ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿ ಅಭಿವೃದ್ಧಿ ಕಡೆಗಣಿಸಿರುವ ಸರ್ಕಾರದ ವಿರುದ್ಧ ಬಿಜೆಪಿ ಸಂಸದರು, ಶಾಸಕರು ಹಾಗೂ ಮುಖಂಡರು ಬೀದಿಗಿಳಿದು ಗುಂಡಿ ಭಾಗ್ಯ ಯೋಜನೆ ಪ್ರದರ್ಶನ ನಡೆಸಿದರು.
ಗುಂಡಿ ಮುಚ್ಚಿ ಪ್ರತಿಭಟನೆ
ಸಾಂಕೇತಿಕವಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಯ ಸ್ಥಳೀಯ ಶಾಸಕರು ಮತ್ತು ಸಂಸದರು ಗುಂಡಿಗಳನ್ನು ಮುಚ್ಚಿಸಿ, ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಿದರು.
ಮತ್ತೆ ಕೆಲವೆಡೆ ರಸ್ತೆ ರೋಕೋ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ರಾಜಕೀಯ ಬಿಟ್ಟು ಗುಂಡಿ ಮುಚ್ಚಿ ಎಂದು ಆಗ್ರಹಿಸಿದರು.
ವಿವಿಧ ರೂಪಗಳಲ್ಲಿ ಜನರಿಂದ ತೆರಿಗೆ ಸುಲಿಗೆ ಮಾಡಿ ಅಭಿವೃದ್ಧಿಗೆ ಬಳಸದೆ ಗ್ಯಾರಂಟಿ ಜಪ ಮಾಡಿಕೊಂಡು ಕುಳಿತಿದ್ದಾರೆ.
ರಸ್ತೆ ಕೆರೆಗಳಾಗಿವೆ
ಕೆಲವು ರಸ್ತೆಗಳಂತೂ ಕೆರೆಗಳಾಗಿ ಮಾರ್ಪಟ್ಟಿವೆ, ಇನ್ನು ಕೆಲವೆಡೆ ಮರ-ಗಿಡಗಳನ್ನು ಬೆಳೆಸುವಷ್ಟು ಆಳವಾದ ಗುಂಡಿಗಳಾಗಿವೆ ಆದರೂ ಸರ್ಕಾರದ ಕಣ್ಣು ತೆರೆದಿಲ್ಲ.
ಕಳಪೆ ಕಾಮಗಾರಿ ಮಾಡಿದ್ದರಿಂದಲೇ ರಾಜ್ಯಾದ್ಯಂತ ರಸ್ತೆಗಳು ಕೆರೆ ಕಟ್ಟೆಗಳಾಗಿ ಮಾರ್ಪಟ್ಟಿವೆ, ರಸ್ತೆ ಗುಂಡಿಗಳಿಂದ ಅಪಘಾತಗಳಾಗಿ ಸಾವು-ನೋವು ಸಂಭವಿಸಿವೆ.
ಬಸ್‌ಗಳೇ ಬೀಳುತ್ತಿವೆ
ಬಸ್‌ಗಳೇ ಉರುಳಿ ಬೀಳುತ್ತವೆ ಎಂದರೆ, ಯಾವ ಪ್ರಮಾಣದಲ್ಲಿ ರಸ್ತೆ ಗುಂಡಿಗಳಾಗಿವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ.
ತಕ್ಷಣ ಹಣ ಬಿಡುಗಡೆ ಮಾಡಿ ನಿಮ್ಮ ಗುಂಡಿ ಭಾಗ್ಯ ಯೋಜನೆಗೆ ಮೋಕ್ಷ ನೀಡಿ ಎಂದು ಆಗ್ರಹಿಸಿದ್ದಾರೆ.

