ಬೆಂಗಳೂರು:ಬಿಡದಿಯಲ್ಲಿನ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆ ಕೈ ಬಿಡುವಂತೆ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದಿಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಸರ್ಕಾರದ ರೈತ ವಿರೋಧಿಯಾಗಿದ್ದು, ಯೋಜನೆ ಕೈಬಿಡುವವರೆಗೂ, ಪಕ್ಷ ನಾಳೆಯಿಂದ ಬೃಹತ್ ಹೋರಾಟ ನಡೆಸಲಿದೆ ಎಂದರು.
ಕೊನೆಯವರೆಗೂ ಹೋರಾಟ
ರೈತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ, ಯೋಜನೆಯನ್ನ ಕೈ ಬಿಡುವವರೆಗೂ ಹೋರಾಟ ನಿಲ್ಲುವುದಿಲ್ಲ, ಕೊನೆಯ ಹಂತದವರೆಗೂ ರೈತರ ಧ್ವನಿಯಾಗಿ ನಿಲ್ಲುತ್ತೇವೆ.
ಕಳೆದ ಹಲವು ತಿಂಗಳಿಂದ ಬಿಡದಿ ಭಾಗದ ರೈತರು ತಮ್ಮ ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ, ಸರ್ಕಾರ ರೈತರ ವಿಶ್ವಾಸಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ, ಆಕ್ರೋಶ ಹೆಚ್ಚುತ್ತಿದೆ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸರ ಕ್ರಮದಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಸರ್ಕಾರ ರೈತರ ಜಮೀನು ಕಸಿಯುವ ಕೆಲಸ ಮಾಡುತ್ತಿದೆ, ರೈತರು ಹೋರಾಟ ಮಾಡುತ್ತಿದ್ದಾರೆ, ನಾಳೆ ಜೆಡಿಎಸ್ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿ ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ನಡೆಸುತ್ತದೆ ಎಂದರು.
ಸಾವಿರ ದಿನಗಳ ಹೋರಾಟ
ದೇವನಹಳ್ಳಿ ಚನ್ನರಾಯಪಟ್ಟಣದಲ್ಲೂ ಇದೇ ರೀತಿ ಆಗಿತ್ತು, ರೈತರು ಒಂದು ಸಾವಿರ ದಿನಗಳ ಹೋರಾಟ ಮಾಡಿದ್ದರು, ಅದೇ ರೀತಿ ಸರ್ಕಾರದ ವಿರುದ್ಧ ಜೆಡಿಎಸ್ ಹೋರಾಡಲಿದೆ.
ಎಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ, ರೈತ ಹೋರಾಟಗಾರರೂ ಇರುತ್ತಾರೆ.
ಮೊದಲು 900 ಎಕರೆಯಲ್ಲಿ ಪೈಲೆಟ್ ಪ್ರಾಜೆಕ್ಟ್ ಮಾಡಿ ತೋರಿಸಿ, ಕೆಐಡಿಬಿ ಲ್ಯಾಂಡ್‌ನಲ್ಲಿ ತೋರಿಸಿದರೆ ಜನರಿಗೆ ವಿಶ್ವಾಸ ಮೂಡುತ್ತದೆ, ಪರಿಸರ ಕ್ಲೀಯರನ್ಸ್ ಪಡೆದುಕೊಂಡಿಲ್ಲ, ಜಿಬಿಡಿಎಗೆ ಅನುಭವ ಇಲ್ಲ, ಹಣಕಾಸು ಮೂಲ ಇದೆಯಾ, ಸರ್ಕಾರ ಉತ್ತರ ನೀಡಬೇಕು.
ಸೌಜನ್ಯಕ್ಕೂ ಸಭೆ ಮಾಡಿಲ್ಲ
ರೈತರ ಪರಿಹಾರದ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೌಜನ್ಯಕ್ಕಾದರೂ ಒಂದು ಸಭೆ ಮಾಡಿಲ್ಲ, ರೈತರ ಮುಂದೆ ತೊಡೆ ತಟ್ಟಿರೋದು ನೋಡಿದ್ದೀವಿ, ನನ್ನ ತಡೆಯಿರಿ ಎಂಬ ಸವಾಲು ಹಾಕಿದ್ದೀರಾ ಎಂದು ನಿಖಿಲ್ ಪ್ರಶ್ನಿಸಿದರು.
ರೈತರ ಜಮೀನು ಮಾರಾಟ ಮಾಡದಂತೆ ಆದೇಶ ಮಾಡಿದ್ದೀರಾ, ಅವರು ಮಕ್ಕಳ ಜೀವನಕ್ಕೆ ಏನು ಮಾಡಬೇಕು, ರೈತ ಬೀದಿಗೆ ಬರ್ತಾನೆ, ಅದಕ್ಕೆ ಸಾಮಾಜಿಕ ಸಮೀಕ್ಷೆ ಮಾಡಿದ್ದೀರಾ, ಜಿಲ್ಲೆಯಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರಿದ್ದಾರೆ, 10 ಹಳ್ಳಿಗಳ ರೈತರ ಜೊತೆ ಮಾತನಾಡಿದ್ದೀರಾ, ಇದು ಪ್ರಜಾಪ್ರಭುತ್ವ ವಿರೋಧಿ ಎಂದರು.
ರೈತರ ಪ್ರಬಲ ವಿರೋಧ
ಶೇ.80ರಷ್ಟು ರೈತರು ಭೂಸ್ವಾಧೀನ ಪ್ರಕ್ರಿಯೆಗೆ ಪ್ರಬಲ ವಿರೋಧ ಮಾಡಿದ್ದಾರೆ, ಕೂಡಲೇ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಇದುವರೆಗೆ 4 ಲಕ್ಷ ಮನೆ ತಲುಪಿದೆ, ಸಮೀಕ್ಷೆ ಮಾಡೋಕೆ ಹೆಚ್ಚು ಹಣ ಆಗುತ್ತೆ, ಸಮೀಕ್ಷೆ ಮಾಡುವ ಶಿಕ್ಷಕರಿಗೆ ತರಬೇತಿ ಸಹ ನೀಡಿಲ್ಲ, 190 ಕೋಟಿ ರೂ. ಖರ್ಚು ಮಾಡಿರುವ ಕಾಂತರಾಜು ವರದಿಯನ್ನ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.

