ಬೆಳಗಾವಿ:ಅಧಿಕಾರ ಜಂಜಾಟದಲ್ಲಿ ಮುಳುಗುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಪಾಲಿಗೆ ಬದುಕಿಲ್ಲ, ಸತ್ತಿದೆ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ಸುದ್ದಿ ಮಾಧ್ಯಮಗಳಲ್ಲಿ ನಿರಂತರವಾಗಿ ಮುಖ್ಯಮಂತ್ರಿ ಬದಲಾವಣೆ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ, ಡಾ.ಪರಮೇಶ್ವರ್ ಮುಖ್ಯಮಂತ್ರಿ, ಜಾರಕಿಹೊಳಿ ಮುಖ್ಯಮಂತ್ರಿ ಎಂಬ ಸುದ್ದಿಗಳು ಬರುತ್ತಿವೆ, ಇದನ್ನು ಯಾರಾದರೂ ಸರ್ಕಾರ ಎನ್ನುತ್ತಾರೆಯೇ ಎಂದರು.
ಮುಖ್ಯಮಂತ್ರಿ ಜವಾಬ್ದಾರಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರಿಗೆ ಸಾಮಾನ್ಯ ಜ್ಞಾನ ಮತ್ತು ಜವಾಬ್ದಾರಿ ಇದ್ದಿದ್ದರೆ ಅತಿವೃಷ್ಟಿಯಿಂದ ತೊಂದರೆಗೆ ಒಳಗಾದ ಪ್ರದೇಶಗಳಿಗೆ ತೆರಳಿ ಪ್ರವಾಹ ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕಿತ್ತು ಎಂದರು.
ಅತಿವೃಷ್ಟಿ ಪೀಡಿತ ಪ್ರದೇಶಗಳ ರೈತರು ಹಬ್ಬ ಆಚರಿಸಲಾಗದೆ ಬೀದಿಯಲ್ಲಿದ್ದಾರೆ, ಎಷ್ಟು ಮನೆಗಳು ಹಾನಿಯಾಗಿವೆ ಎಂಬ ಮಾಹಿತಿಯೂ ಮುಖ್ಯಮಂತ್ರಿ ಬಳಿ ಇಲ್ಲ, ಇದು ತುಘಲಕ್ ಸರ್ಕಾರ, ಇಂಥ ನೀಚ ಸರ್ಕಾರವನ್ನು ನೋಡಿಯೇ ಇಲ್ಲ.
ಈ ಹಿಂದಿನ ಬಿಜೆಪಿ ಆಡಳಿತದ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿದ ಕಾಂಗ್ರೆಸ್, ಅಧಿಕಾರಕ್ಕೆ ಬಂದು ಅದಕ್ಕಿಂತ ದುಪ್ಪಟ್ಟು ಕಮಿಷನ್ ಪಡೆಯುವ ಸರ್ಕಾರ ಎಂಬುದಾಗಿ ಗುತ್ತಿಗೆದಾರರಿಂದಲೇ ಆರೋಪ ಹೊತ್ತಿದೆ.
ಸಂಕಷ್ಟದಲ್ಲಿ ರೈತರು
ಬೆಳೆ ಹಾನಿ ಕುರಿತು ಮುಖ್ಯಮಂತ್ರಿ ನೀಡಿದ ಅಂಕಿ-ಅಂಶವೂ ಅಪ್ಪಟ ಸುಳ್ಳು, ರೈತರು ಸಂಕಷ್ಟದಲ್ಲಿದ್ದರೆ, ಅತ್ತ ಆರಾಮವಾಗಿ ದಸರಾ ಉದ್ಘಾಟನೆ ನೆರವೇರಿಸಿ, ಸಂತೋಷ ಕೂಟದಲ್ಲಿ ಭಾಗಿಯಾಗಿ, ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವುದರಲ್ಲೇ ನಿರತರಾಗಿದ್ದಾರೆ.
ಮುಖ್ಯಮಂತ್ರಿ ಗಾದಿಯಿಂದ ಯಾವಾಗ ಇಳಿತೀಯಪ್ಪ ಸಿದ್ದರಾಮಯ್ಯ ಎಂದು ಒಂದೆಡೆ ಕಾಂಗ್ರೆಸ್ ಶಾಸಕರೇ ಪ್ರಶ್ನಿಸುತ್ತಿದ್ದರೆ, ಇನ್ನೊಂದೆಡೆ, ರಂಗನಾಥ್, ಶಿವರಾಮೇಗೌಡ ಅವರಿಂದ ಹಿಡಿದು ಬಹಳಷ್ಟು ಶಾಸಕರು ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಯಾವಾಗ ಎಂದು ಕೇಳುತ್ತಿದ್ದಾರೆ ಎಂದರು.

