ಬೆಂಗಳೂರು:ಭಾರಲೋಹಯುಕ್ತ ರಾಸಾಯನಿಕ ಪಟಾಕಿ ಮಾರಾಟ ಮಾಡುವುದಿಲ್ಲ, ಪರಿಸರ ಸ್ನೇಹಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡುವುದಾಗಿ ಪಟಾಕಿ ಮಳಿಗೆ ಮಾಲೀಕರಿಂದ ಮುಚ್ಚಳಿಕೆ ಬರೆಸಿಕೊಳ್ಳುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಇಂದಿಲ್ಲಿ ಸೂಚಿಸಿದ್ದಾರೆ.
ಪರಿಸರ ಸ್ನೇಹಿ (ವಿದ್ಯುತ್ ಚಾಲಿತ) 68 ವಾಹನಗಳಿಗೆ ಹಸಿರು ನಿಶಾನೆ ತೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರಲೋಹಯುಕ್ತ ರಾಸಾಯನಿಕ ಪಟಾಕಿ ಮಾರಾಟ ಮಾಡುವವರ ಪರವಾನಗಿ ರದ್ದುಪಡಿಸಲು ಕ್ರಮ ವಹಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎಂ.ಪಿ.ನರೇಂದ್ರ ಸ್ವಾಮಿ ಅವರಿಗೆ ತಿಳಿಸಿದರು.
15 ವರ್ಷದ ಡೀಸೆಲ್ ವಾಹನ
ಹದಿನೈದು ವರ್ಷ ಪೂರೈಸಿದ ಡೀಸೆಲ್ ವಾಹನಗಳನ್ನು ಸ್ಕ್ರ್ಯಾಪ್ ನೀತಿಯನ್ವಯ ಬಳಕೆಯಿಂದ ದೂರವಿಡಬೇಕು, ಏಕ ಬಳಕೆ ಪ್ಲಾಸ್ಟಿಕ್, ವೈದ್ಯಕೀಯ ತ್ಯಾಜ್ಯ, ಇ-ತ್ಯಾಜ್ಯ ವಿಲೇವಾರಿ ಘಟಕಗಳ ಮೇಲೆ ನಿಗಾ ಮತ್ತು ಏಕ ಬಳಕೆ ಪ್ಲಾಸ್ಟಿಕ್ ತಯಾರಿಕಾ ಘಟಕ, ಮಳಿಗೆಗಳ ತಪಾಸಣೆ, ಪರಿಶೀಲನೆ, ಜಲ ಮೂಲಗಳ ಗುಣಮಟ್ಟ ಪರೀಕ್ಷೆಗೆ ಸಿಬ್ಬಂದಿಗೆ ಎದುರಾಗಿದ್ದ ವಾಹನಗಳ ಕೊರತೆ ನೀಗಿಸಲು ವಿದ್ಯುತ್ ಚಾಲಿತ ವಾಹನಗಳನ್ನು ನೀಡಲಾಗಿದೆ.
ಇವುಗಳ ಸದ್ಬಳಕೆಯಿಂದ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಪರಿಸರ ಸಂರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

