ಬೆಂಗಳೂರು:ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವಂತೆ ಈ ಹಿಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕೇಂದ್ರಕ್ಕೆ ಪ್ರಸ್ತಾಪ ಹೋಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಶಿಫಾರಸಿಗೆ ಸಂಬಂಧಿಸಿದಂತೆ ಕೇಂದ್ರದಿಂದ ಕುರುಬ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸುವಂತೆ ಸೂಚಿಸಲಾಗಿತ್ತು, ಆಗ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಆದೇಶ ಮಾಡಿತ್ತು ಎಂದರು.
ಕುಲಶಾಸ್ತ್ರಿಯ ಅಧ್ಯಯನ
ನಂತರ ಬಿಜೆಪಿ ಆಡಳಿತಾವಧಿಯಲ್ಲಿ ಕುಲಶಾಸ್ತ್ರಿಯ ಅಧ್ಯಯನ ವರದಿ ಬಂದಿತು, ಅದನ್ನು ನಮ್ಮ ಸರ್ಕಾರ ಒಪ್ಪಿತ್ತು, ಆಗ ವಿಧಾನಸಭೆಗೆ ಚುನಾವಣೆ ನಡೆದು ನಮ್ಮ ಪಕ್ಷ ಸೋಲನುಭವಿಸಿತು.
ಅಧಿಕಾರಕ್ಕೆ ಬಂದ ಈಗಿನ ಕಾಂಗ್ರೆಸ್ ಸರ್ಕಾರ ಶಿಫಾರಸು ಪರಿಶೀಲಿಸಿ 2023ರ ಜುಲೈ 20ರಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಿತು, ಬೇಕಿದ್ದರೆ ಸರ್ಕಾರದ ದಾಖಲೆಗಳನ್ನು ಸಿದ್ದರಾಮಯ್ಯ ತೆಗೆದು ನೋಡಲಿ, ಈಗ ಅವರ ಕೈಯಲ್ಲೇ ಅಧಿಕಾರ ಇದೆ, ಏನು ತೀರ್ಮಾನ ಕೈಗೊಳ್ಳುವರೋ ನೋಡೋಣ.
ಪರಿಶಿಷ್ಟ ಪಂಗಡ ಪಟ್ಟಿಗೆ ಕುರುಬ ಸಮುದಾಯ ಸೇರ್ಪಡೆಯಿಂದ ವಾಲ್ಮೀಕಿ ಮತ್ತು ಕುರುಬರ ನಡುವೆ ಸಮಸ್ಯೆ ಆಗದು, ಅಹಿಂದ ನಾಯಕರಾಗಿ ಸಿದ್ದರಾಮಯ್ಯ ಅವರೇ ಇದ್ದಾರಲ್ಲಾ, ಆದರೆ, ಮೀಸಲಾತಿ ಹೆಚ್ಚಳ ಮಾಡುವುದು ಅಷ್ಟು ಸುಲಭದ ವಿಷಯವಲ್ಲ ಎಂದರು.
ರೈತರಿಗೆ 2 ಪಟ್ಟು ಪರಿಹಾರ ನೀಡಿ
ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹ ಹಾನಿಗೆ ಸರ್ಕಾರ ರೈತರಿಗೆ ಕೂಡಲೇ ಎರಡು ಪಟ್ಟು ಪರಿಹಾರ ನೀಡಬೇಕು, ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಪ್ರವಾಹದಿಂದ ಆದ ಹಾನಿಗೆ 63 ಹೊಸ ಗ್ರಾಮಗಳನ್ನೇ ಕಟ್ಟಿಸಿದರು, ಎರಡನೇ ಬಾರಿ ಪ್ರವಾಹದಿಂದಾದ ಹಾನಿಗೆ ಸುಮಾರು ಮೂರು ಲಕ್ಷ ಮನೆಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ನೀಡಿದ್ದೇವೆ.
ತಾವು ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರ ಸರ್ಕಾರ ನೀಡುವ ಪ್ರವಾಹ ಪರಿಹಾರ ಮೊತ್ತಕ್ಕೆ ಎರಡು ಪಟ್ಟು ಪರಿಹಾರ ನೀಡಿದ್ದೆವು, ಪ್ರತಿ ಎಕರೆಗೆ ಒಣ ಬೇಸಾಯಕ್ಕೆ 13 ಸಾವಿರ ರೂ., ನೀರಾವರಿಗೆ 18 ಸಾವಿರ ರೂ., ತೋಟಗಾರಿಕಾ ಬೆಳೆಗಳಿಗೆ 25 ಸಾವಿರ ರೂ. ನೀಡಿದ್ದೆವು, ಸುಮಾರು ಏಳು ಲಕ್ಷ ರೈತರು ಪರಿಹಾರ ಪಡೆದುಕೊಂಡಿದ್ದರು ಎಂದರು.
ಸಾಮಾಜಿಕ, ಆರ್ಥಿಕ ಸಮೀಕ್ಷೆಯಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ, ಪೂರ್ಣ ಪ್ರಮಾಣದಲ್ಲಿ ಸರಿಯಾದ ಸಮೀಕ್ಷೆ ನಡೆಯುತ್ತಿಲ್ಲ, ಗಣತಿದಾರರು ಭೇಟಿ ನೀಡುವ ವೇಳೆ ಬಹಳಷ್ಟು ಜನ ಮನೆಯಲ್ಲಿ ಇರುವುದಿಲ್ಲ, ಗಣತಿಗೆ ಸಹಕಾರವನ್ನೂ ನೀಡುತ್ತಿಲ್ಲ, ಈ ಹಿನ್ನೆಲೆಯಲ್ಲಿ ಸಮೀಕ್ಷೆಗೆ ಯಾವುದೇ ಮಹತ್ವ ಉಳಿದಿಲ್ಲ ಎಂದರು.
ಕೇಂದ್ರದಿಂದ ಹೆಚ್ಚು ಅನುದಾನ
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯವಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪ ಸರಿಯಲ್ಲ, 15ನೇ ಹಣಕಾಸು ಆಯೋಗದ ಶಿಫಾರಸು ಹಾಗೂ ಇತರ ಯೋಜನೆಗಳಿಗೆ ಐದು ಪಟ್ಟು ಹಣ ಹೆಚ್ಚಿಗೆ ನೀಡಿದೆ, ಇದು 14ನೇ ಹಣಕಾಸು ಆಯೋಗಕ್ಕಿಂತ ಒಂದು ಲಕ್ಷ ಕೋಟಿ ರೂ. ಹೆಚ್ಚು ನೀಡಿದೆ.
ಯುಪಿಎ ಆಡಳಿತಾವಧಿಯಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಐದು ವರ್ಷದಲ್ಲಿ ಒಟ್ಟು 7,000 ಕೋಟಿ ರೂ. ನೀಡಲಾಗಿತ್ತು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಪ್ರತಿ ವರ್ಷ 7,000 ಕೋಟಿ ರೂ. ನೀಡುತ್ತಿದೆ, 6,000 ಕಿ.ಮೀ. ಹೆದ್ದಾರಿ ನಿರ್ಮಾಣವಾಗುತ್ತಿದೆ, ಕೇಂದ್ರದ ಅನುದಾನದಿಂದಲೇ ರಾಜ್ಯದಲ್ಲಿ ಯೋಜನೆಗಳು ನಡೆಯುತ್ತಿವೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಬಳಿ ಹಣವೇ ಇಲ್ಲ ಎಂದರು.
ಕಾಂಗ್ರೆಸ್‌ನಲ್ಲಿ ಕ್ರಾಂತಿ ಆಗುತ್ತೋ ಬಿಡುತ್ತೋ
ರಾಜ್ಯ ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ಆಗುತ್ತೋ ಬಿಡುತ್ತೋ ಅದು ಆ ಪಕ್ಷದ ಆಂತರಿಕ ವಿಚಾರ, ಆದರೆ, ಆಡಳಿತ ಕಡೆಗಣಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದರೆ, ಕೆಲವರು ಮುಂದುವರೆಯುವುದಿಲ್ಲ ಎನ್ನುತ್ತಾರೆ, ಆಡಳಿತ ಶಾಸಕರು ಮತ್ತು ಮಂತ್ರಿಗಳ ನಡುವೆ ಸಾಕಷ್ಟು ಗೊಂದಲ ಇದೆ.
ಅಶಿಸ್ತಿಗೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರೂ ಶಾಸಕರು ಸುಮ್ಮನಾಗುತ್ತಿಲ್ಲ, ಆ ಪಕ್ಷದ ಹೈಕಮಾಂಡ್‌ಗೆ ಸ್ಪಷ್ಟತೆ ಇಲ್ಲ, ಸಿದ್ದರಾಮಯ್ಯ ಹಿನ್ನೆಲೆ, ಇಮೇಜ್ ಕುರಿತು ಯೋಚನೆ ಮಾಡುತ್ತಿದ್ದಾರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಾ ಪಕ್ಷ ಕಟ್ಟಿದ್ದು, ಅವರ ಬಗ್ಗೆಯೂ ಯೋಚಿಸಿ ಯಾವುದೇ ನಿರ್ಧಾರಕ್ಕೆ ಬರಲು ಆಗುತ್ತಿಲ್ಲ, ಕ್ರಾಂತಿ ನವೆಂಬರ್‌ನಲ್ಲಿ ಆಗುತ್ತದೋ ಡಿಸೆಂಬರ್‌ನಲ್ಲಿ ಆಗುತ್ತದೋ ಕಾದುನೋಡಬೇಕು ಎಂದರು.

