ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಂಬ್
ಬೆಂಗಳೂರು:ರಾಜ್ಯ ಕಾಂಗ್ರೆಸ್ ಇತಿಹಾಸದಲ್ಲೇ ಸಂಖ್ಯಾಬಲದ ಆಧಾರದ ಮೇಲೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಆಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಂಬ್ ಸಿಡಿಸಿದ್ದಾರೆ.
ಪಕ್ಷದ ವರಿಷ್ಠರ ನಿರ್ಧಾರವೇ ಅಂತಿಮ, ನಮ್ಮಲ್ಲಿ ಶಾಸಕರ ಸಂಖ್ಯಾಬಲ ನಗಣ್ಯ, ಈ ಹಿಂದೆ ನಾಯಕರುಗಳ ಆಯ್ಕೆ ಇತಿಹಾಸವನ್ನು ತಿರುವಿ ಹಾಕಿದರೆ ವಾಸ್ತವ ತಿಳಿಯುತ್ತದೆ.
ಮಂತ್ರಿಮಂಡಲಕ್ಕೇ ಸೇರಿಸಿಕೊಂಡಿರಲಿಲ್ಲ
ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ನನ್ನನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡಿರಲಿಲ್ಲ.
ಎಸ್.ಎಂ.ಕೃಷ್ಣ ಆಡಳಿತದಲ್ಲಿ ನಾನು ಬೇರೆ ಪಕ್ಷಗಳಿಂದ ಯಾರನ್ನೆಲ್ಲಾ ಕರೆದುಕೊಂಡು ಬಂದೆನೋ ಅವರೆಲ್ಲಾ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಯಾದರು, ನನಗೆ ಮಾತ್ರ ಅವಕಾಶ ದೊರೆಯಲಿಲ್ಲ.
ಅಧಿಕಾರ ತಪ್ಪಿದ್ದರ ಬಗ್ಗೆ ಸೋನಿಯಾ ಗಾಂಧಿ ಅವರ ಸಮಯ ಪಡೆದು ನಾನು ನೇರವಾಗಿ ವಿಷಯ ವಿವರಿಸಿದೆ.
ಸೋನಿಯಾ ಸಲಹೆ ಪಾಲಿಸಿದ್ದೆ
ಸೋನಿಯಾ ಅವರು ನನಗೆ ಸ್ವಲ್ಪ ದಿನ ಸುಮ್ಮನಿರು ಎಂದರು, ತಕ್ಷಣವೇ ರಾಹುಲ್ ಗಾಂಧಿ ನನ್ನನ್ನು ರಾಜಾಸ್ತಾನದಲ್ಲಿ ಚುನಾವಣಾ ಕಾರ್ಯಕ್ಕೆ ಕಳುಹಿಸಿಕೊಟ್ಟರು.
ಪಕ್ಷದ ಆದೇಶದಂತೆ ಎರಡು ತಿಂಗಳು ಕೆಲಸ ಮಾಡಿ ಹಿಂತಿರುಗಿ ಬರುತ್ತಿದ್ದಂತೆ ಸಿದ್ದರಾಮಯ್ಯ ಸಂಪುಟಕ್ಕೆ ಸೇರ್ಪಡೆಯಾಗು ಎಂದರು.
ವರಿಷ್ಠರ ಆದೇಶವನ್ನು ಮುಖ್ಯಮಂತ್ರಿ ಅವರಿಗೆ ತಲುಪಿಸಿದಾಗ, ನಿನಗೆ ಇಂಧನ ಖಾತೆ ಬೇಕೋ, ಬೃಹತ್ ಕೈಗಾರಿಕಾ ಖಾತೆ ಬೇಕೋ ಎಂದರು, ನಾನು ಇಂಧನ ಖಾತೆ ಪಡೆದು ಸಚಿವನಾದೆ.
ನನ್ನ ಶ್ರಮಕ್ಕೆ ಫಲ ದೊರೆಯಲಿದೆ
ಇದು ದೆಹಲಿ ಕಾಂಗ್ರೆಸ್‌ನ ಬಲ, ನನಗೆ ಯಾವ ಸಮಯದಲ್ಲಿ ಏನು ಸಿಗಬೇಕೋ ಅದು ಸಿಗಲಿದೆ, ನನ್ನ ಶ್ರಮಕ್ಕೆ ಫಲ ದೊರೆಯುತ್ತದೆ ಎಂಬ ಆಶಾಭಾವನೆ ಹೊಂದಿರುವವನು ನಾನು.
ಪಕ್ಷ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ, ನೀನು ಉಪಮುಖ್ಯಮಂತ್ರಿ ಆಗು ಎಂಬುದಾಗಿ ಹೇಳಿ ಕಳುಹಿಸಿದರು, ಅವರ ಆದೇಶದಂತೆ ಸರ್ಕಾರ ರಚನೆ ಆಯಿತು.
ಸಂಪುಟ ಪುನರ್ ರಚನೆ ಆಗುತ್ತದೋ ಅಥವಾ ಹೊಸ ನಾಯಕತ್ವದಲ್ಲಿ ಸಂಪುಟ ರಚನೆ ಆಗುವುದೋ ಎಂಬ ಪ್ರಶ್ನೆಗೆ, ಇದು ಮುಖ್ಯಮಂತ್ರಿಗಳ ಪರಮಾಧಿಕಾರ ಹಾಗೂ ವರಿಷ್ಠರ ನಿರ್ಧಾರ.
ಎಲ್ಲ ಬಹಿರಂಗಪಡಿಸಲಾಗದು
ಆದರೆ, ಪಕ್ಷ ಮತ್ತು ಸರ್ಕಾರಕ್ಕೆ ಸಂಬಂಧಿಸಿದಂತೆ ನಾನು ಹಾಗೂ ಸಿದ್ದರಾಮಯ್ಯ ನಾಲ್ಕು ಗೋಡೆಗಳ ಮಧ್ಯೆ ಹಲವು ಬಾರಿ ಮಾತನಾಡಿದ್ದೇವೆ, ಅದೆಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ.
ಅಧಿಕಾರ ಹಂಚಿಕೆ ವಿಷಯ ಕುರಿತಂತೆ ಸಿದ್ದರಾಮಯ್ಯ ಐದು ವರ್ಷ ನಾನೇ ಆಡಳಿತದಲ್ಲಿ ಇರುತ್ತೇನೆ, ಆದರೆ, ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೂ ಬದ್ಧ ಎಂದಿರುವುದನ್ನು ನೀವು ಯಾವ ರೀತಿಯಲ್ಲಾದರೂ ಅರ್ಥೈಸಿಕೊಳ್ಳಿ ಎಂದು ಶಿವಕುಮಾರ್ ಖಾಸಗಿ ಟಿವಿ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ.

