ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮೊಕದ್ದಮೆಯಲ್ಲಿ ಜಾಮಿನು ರದ್ದಾಗಿ ಜೈಲುಪಾಲಾಗಿರುವ ಚಿತ್ರನಟ ದರ್ಶನ್ ಗೆ ಬೆನ್ನು ನೋವು ಮತ್ತೆ ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ ಅವಕಾಶ ಮಾಡಿಕೊಡುವಂತೆ ಕಾರಾಗೃಹ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ದರ್ಶನ್ ಅವರಿಗೆ ಕಳೆದ ಒಂದು ವಾರದಿಂದ ಬೆನ್ನು ನೋವು ಹೆಚ್ಚಾಗಿದ್ದು, ನಡೆಯಲಾಗದೆ ಕುಂಟುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕಾರಾಗೃಹ ಅಧಿಕಾರಿಗಳ ಮನವಿ ಮೇರೆಗೆ ಆರೋಗ್ಯ ತಪಾಸಣೆ ನಡೆಸಿದ ಸಿ.ವಿ.ರಾಮನ್ ಆಸ್ಪತ್ರೆ ವೈದ್ಯರು ಫಿಜಿಯೋಥೆರಫಿ ಅವಶ್ಯಕತೆ ಇದೆ ಎಂಬ ಸಲಹೆ ನೀಡಿದ್ದಾರೆ.
ಫಿಸಿಯೋಥೆರಪಿ ಚಿಕಿತ್ಸೆ
ಸದ್ಯ ವಾರಕ್ಕೆ ಎರಡು ಬಾರಿ ಮಾತ್ರ ಫಿಸಿಯೋಥೆರಪಿ ಚಿಕಿತ್ಸೆಗೆ ವೈದ್ಯರು ಮುಂದಾಗಿದ್ದು, ಬೆನ್ನುನೋವಿನ ಜೊತೆಗೆ ಮೊಣಕೈ ನೋವು ಇದೆ ಎಂದು ದರ್ಶನ್ ಹೇಳಿಕೊಂಡಿದ್ದಾರೆ.
ಕಾರು ಅಪಘಾತ ಒಂದರಲ್ಲಿ ಮೊಣಕೈಗೆ ಪೆಟ್ಟು ಬಿದ್ದು ಶಸ್ತ್ರಚಿಕಿತ್ಸೆ ಆಗಿತ್ತು, ಕೈಗೆ ರಾಡ್ ಹಾಕಲಾಗಿದೆ, ಈಗ ನೋವು ಹೆಚ್ಚಿದ್ದು, ಎರಡು ಬೆರಳು ಮರಗಟ್ಟಿದೆ ಎನ್ನುತ್ತಿದ್ದಾರೆ.
ಹಾಸಿಗೆ-ದಿಂಬು ನೀಡಿ
ಹಾಸಿಗೆ-ದಿಂಬು ನೀಡಿ ಎಂದು ದರ್ಶನ್ ಅಲವತ್ತು ಕೊಂಡಿದ್ದಾರೆ, ಈಗ ನೆಲದ ಮೇಲೆ ಮಲಗುತ್ತಿದ್ದು, ಶೀತಕ್ಕೆ ಬೆನ್ನು ನೋವು ಜಾಸ್ತಿಯಾಗಿದೆ, ಮೊಣಕೈ ನೋವಿಗೂ ಚಿಕಿತ್ಸೆ ನೀಡಲು ಮನವಿ ಮಾಡಲಾಗಿದೆ.
ಈ ಮಧ್ಯೆ, ದರ್ಶನ್ ಅಭಿನಯದ ‘ಡೆವಿಲ್’ ಚಿತ್ರ ಪೂರ್ಣಗೊಂಡಿದೆ, ಡಿಸೆಂಬರ್ 12ರಂದು ಬಿಡುಗಡೆ ಆಗುವ ನಿರೀಕ್ಷೆ ಇದ್ದು, ಚಿತ್ರದ ಕೆಲವು ಹಾಡುಗಳು ಈಗಾಗಲೇ ರಿಲೀಸ್ ಆಗಿವೆ.

