ಬೆಂಗಳೂರು:ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ (ಕೆಎಸ್‌ಡಿಎಲ್) 2024-25ನೇ ಸಾಲಿನ ಲಾಭಾಂಶದಲ್ಲಿ 135 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದಿಲ್ಲಿ ಹಸ್ತಾಂತರಿಸಿತು.
ಸಂಸ್ಥೆ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತು ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ 135 ಕೋಟಿ ರೂ. ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿಗೆ ನೀಡಿದರು.
ಸಾರ್ವಕಾಲಿಕ ದಾಖಲೆ
ನಂತರ ಮಾತನಾಡಿದ ಸಚಿವ ಪಾಟೀಲ್, ಕೆಎಸ್‌ಡಿಎಲ್ ಕಳೆದ ಹಣಕಾಸು ವರ್ಷದಲ್ಲಿ 1,700 ಕೋಟಿ ರೂ. ವಹಿವಾಟು ನಡೆಸಿ, 451 ಕೋಟಿ ರೂ. ಲಾಭ ಕಂಡಿದೆ, ಈ ಪೈಕಿ ನಿಯಮದಂತೆ ಶೇ.30ರಷ್ಟು ಲಾಭಾಂಶವನ್ನು ಸರ್ಕಾರಕ್ಕೆ ನೀಡಲಾಗಿದೆ, ವಹಿವಾಟು, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದರು.
ಬಿಜೆಪಿ ಆಡಳಿತದಲ್ಲಿ ಸಂಸ್ಥೆ ಸರ್ಕಾರಕ್ಕೆ 54 ಕೋಟಿ ರೂ. ಡಿವಿಡೆಂಡ್ (ಲಾಭಾಂಶ) ನೀಡಿತ್ತು, 2023-24ರಲ್ಲಿ 108 ಕೋಟಿ ರೂ. ಲಾಭಾಂಶ ಹಸ್ತಾಂತರಿಸಲಾಗಿತ್ತು, ಇದಕ್ಕೆ ಹೋಲಿಸಿದಲ್ಲಿ ಲಾಭಾಂಶದಲ್ಲಿ 27 ಕೋಟಿ ರೂ. ಹೆಚ್ಚಳವಾಗಿದೆ, ಮುಂಬರುವ ವರ್ಷಗಳಲ್ಲಿ ಲಾಭಾಂಶ ಮತ್ತಷ್ಟು ಹೆಚ್ಚಲಿದೆ ಎಂದರು.

