ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ನೀಡಿರುವ ನಾಯಕತ್ವ ಕುರಿತ ಹೇಳಿಕೆಯನ್ನು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಅವರ ಹೇಳಿಕೆಗೆ ನಾನು ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿ ನಮ್ಮ ನಾಯಕ ಎಂಬ ಹೇಳಿಕೆ ನೀಡಿರುವ ವಿಚಾರವನ್ನು ಯಾರ ಬಳಿ ಪ್ರಸ್ತಾಪಿಸಬೇಕೋ, ಅಲ್ಲಿಯೇ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
ಗೊಂದಲ ಹೇಳಿಕೆ ಸರಿಯಲ್ಲ
ಶಿವಕುಮಾರ್ ಹೇಳಿಕೆ ಬೆನ್ನಲ್ಲೇ ಸರ್ಕಾರ ಮತ್ತು ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಅವರ ಆಪ್ತ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ಹರಿಹಾಯ್ದಿದ್ದಾರೆ.
ಮುಖ್ಯಮಂತ್ರಿ ಅವರಂತೆಯೇ ಉಪಮುಖ್ಯಮಂತ್ರಿ ಸಹಾ ಸಾಮಾಜಿಕ ಬದ್ಧತೆ ಮೇಲೆ ರಾಜಕೀಯ ಮಾಡಿಕೊಂಡು ನಿಷ್ಠಾವಂತ ಕಾಂಗ್ರೆಸ್ಸಿಗರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಾಸಕರಾದ ರಂಗನಾಥ್ ಹಾಗೂ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ.
ಶಾಸಕಾಂಗ ಪಕ್ಷದ ನಾಯಕತ್ವ ಹೊಣೆ ಯಾರಿಗೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಹುದ್ದೆ ಯಾರು ನಿರ್ವಹಿಸಬೇಕೆಂಬ ತೀರ್ಮಾನವನ್ನು ಪಕ್ಷದ ವರಿಷ್ಠರೇ ಕೈಗೊಳ್ಳುತ್ತಾರೆ.
ಸಾಮಾಜಿಕ ಬದ್ಧತೆಯ ಪಕ್ಷ
ಕಾಂಗ್ರೆಸ್ ಸಾಮಾಜಿಕ ಬದ್ಧತೆಯ ಪಕ್ಷ, ಕಾರ್ಯಕರ್ತರು, ಶಾಸಕರು, ನಾಯಕರು ಅದರಡಿಯೇ ಕಾರ್ಯನಿರ್ವಹಿಸುತ್ತಾರೆ, ಇದರ ಅರಿವು ಯತೀಂದ್ರ ಅವರಿಗೂ ಇರುತ್ತದೆ ಎಂದಿದ್ದಾರೆ.
ಶಿವಕುಮಾರ್ ಯಾವುದೇ ಒಂದು ಸಮುದಾಯದ ಪರವಾಗಿ ನಿಲ್ಲದೆ, ಎಲ್ಲ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಪಕ್ಷ ಮತ್ತು ಸರ್ಕಾರದಲ್ಲಿ ಮಾಡುತ್ತಿದ್ದಾರೆ.
ಅವರು ಮುಖ್ಯಮಂತ್ರಿ ಆಗುವುದು ಖಚಿತ, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಸಚಿವ ಸತೀಶ್ ಜಾರಕಿಹೊಳಿ ಹೆಸರನ್ನು ಯತೀಂದ್ರ ಮುನ್ನೆಲೆಗೆ ಏಕೆ ತಂದರು ಎಂಬ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ರಂಗನಾಥ್ ತಿಳಿಸಿದರು.
ಯತೀಂದ್ರ ಮೇಲೂ ಕ್ರಮ ಜರುಗಿಸಿ
ನಾಯಕತ್ವದ ಬಗ್ಗೆ ಮಾತನಾಡಿದರೆ, ನಮಗೆ ನೋಟಿಸ್ ನೀಡುವ ಪಕ್ಷ ಯತೀಂದ್ರ ಮೇಲೂ ಅದೇ ಮಾನದಂಡ ಅನುಸರಿಸಬೇಕೆಂದು ಇಕ್ಬಾಲ್ ಹುಸೇನ್ ಒತ್ತಾಯಿಸಿದ್ದಾರೆ.
ಈ ಮಧ್ಯೆ, ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಯಾವಾಗ ಏನು ಆಗಬೇಕೋ, ಅದನ್ನು ವರಿಷ್ಠರು ತೀರ್ಮಾನಿಸುತ್ತಾರೆ, ಅದನ್ನು ಬಿಟ್ಟರೆ ಬೇರೆಯವರ ಮಾತಿಗೆ ನಮ್ಮಲ್ಲಿ ಮಾನ್ಯತೆ ಇಲ್ಲ ಎಂದಿದ್ದಾರೆ.
ಯತೀಂದ್ರ ಹೇಳಿಕೆಯನ್ನು ನಾನು ವಿಶ್ಲೇಷಣೆ ಮಾಡುವುದಿಲ್ಲ ಅವರನ್ನೇ ಕೇಳಿಕೊಳ್ಳಿ, ವರಿಷ್ಠರ ತೀರ್ಮಾನವೇ ಅಂತಿಮ.
ಕಾಂಗ್ರೆಸ್‌ಗೆ ಯಾರೂ ಅನಿವಾರ್ಯರಲ್ಲ
ಕಾಂಗ್ರೆಸ್ ವ್ಯವಸ್ಥೆಗೆ ಯಾರೂ ಅನಿವಾರ್ಯರಲ್ಲ, ಒಂದು ಕಾಲದಲ್ಲಿ ಇಂದಿರಾ ಗಾಂಧಿ.., ಇಂದಿರಾ ಗಾಂಧಿ ಅನ್ನುತ್ತಿದ್ದರು, ಅವರ ಕಾಲಾನಂತರ ಪಕ್ಷ ಮೂರ‍್ನಾಲ್ಕು ಬಾರಿ ದೇಶದ ಚುಕ್ಕಾಣಿ ಹಿಡಿಯಲಿಲ್ಲವೇ ಎಂದರು.
ಯತೀಂದ್ರ ಭಾಷಣವನ್ನು ತಮ್ಮದೇ ದಾಟಿಯಲ್ಲಿ ವಿಶ್ಲೇಷಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಅವರು ಸೈದ್ಧಾಂತಿಕವಾಗಿ ಮಾತನಾಡಿದ್ದಾರೆ, ಅದರಲ್ಲಿ ತಪ್ಪೇನಿದೆ ಎಂದು ಮರು ಮಾತನಾಡದೆ ಪತ್ರಕರ್ತರ ಪ್ರಶ್ನೆಗಳಿಂದ ಜಾರಿಕೊಂಡರು.

