ಕೇಂದ್ರ ಸಚಿವ ಕುಮಾರಸ್ವಾಮಿಗೆ ಸಚಿವ ರಾಮಲಿಂಗಾ ರೆಡ್ಡಿ ಪತ್ರ
ಬೆಂಗಳೂರು:ಎಲೆಕ್ಟ್ರಿಕ್ ಬಸ್‌ಗಳ ತಾಂತ್ರಿಕ ದೋಷದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇಂದಿಲ್ಲಿ ತಿಳಿಸಿದ್ದಾರೆ.
ಬಸ್ ಬ್ಯಾಟರಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ಹಠಾತ್ತಾಗಿ ಬ್ರೇಕ್‌ಡೌನ್‌ನಿಂದ ಅಪಘಾತಗಳು ಸಂಭವಿಸಿ ಸಾವು-ನೋವುಗಳು ಉಂಟಾಗಿದ್ದು ಈ ಬಗ್ಗೆ ಗಮನ ಹರಿಸಬೇಕೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ಬಸ್‌ಗಳ ನಿರ್ವಹಣೆ ಕೇಂದ್ರದ್ದು
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಾರಿಗೆ ಸಚಿವರು, ಎಲೆಕ್ಟ್ರಿಕ್ ಬಸ್‌ಗಳ ಸಂಪೂರ್ಣ ನಿರ್ವಹಣೆ ಕೇಂದ್ರ ಬೃಹತ್ ಕೈಗಾರಿಕೆ ಇಲಾಖೆ ಅಡಿ ಬರುತ್ತದೆ.
ಇದರಲ್ಲಿ ನಮ್ಮ ಸಾರಿಗೆ ಇಲಾಖೆಯ ಯಾವುದೇ ಪಾತ್ರ ಇಲ್ಲ, ಬಸ್‌ಗಳು ಅಪಘಾತಕ್ಕೀಡಾದರೆ ಅಥವಾ ಕೆಟ್ಟು ನಿಂತರೆ ನಮ್ಮನ್ನು ದೂಷಿಸುತ್ತಾರೆ, ಇದರ ನಡುವೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಎಲೆಕ್ಟ್ರಿಕ್ ಬಸ್ ಚಾಲಕರು ಮುಷ್ಕರ ನಡೆಸುತ್ತಿರುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಚಾಲಕರ ದಿಢೀರ್ ಮುಷ್ಕರದಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದ್ದು, ತಕ್ಷಣವೇ ಮಧ್ಯಪ್ರವೇಶಿಸುವಂತೆ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ.
ಚಾಲಕರ ಮುಷ್ಕರ
1,500ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ಬಸ್‌ಗಳು ಸಾರಿಗೆ ನಿಗಮದಡಿ ಕಾರ್ಯನಿರ್ವಹಿಸುತ್ತಿವೆ, ಚಾಲಕರು ಕಳೆದ ಎರಡು ದಿನಗಳಿಂದ ಮುಷ್ಕರ ನಡೆಸುತ್ತಿರುವುದರಿಂದ ಬಸ್‌ಗಳು ರಸ್ತೆಗಿಳಿಯದೆ ಸಾರ್ವಜನಿಕರಿಗೆ ತೊಂದರೆ ಆಗಿದೆ.
ತಾಂತ್ರಿಕ ಹಾಗೂ ಚಾಲಕರ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಪರಿಹಾರ ಕಂಡು ಹಿಡಿಯಿರಿ ಎಂದು ಮನವಿ ಮಾಡಿದ್ದಾರೆ.
ಎಲೆಕ್ಟ್ರಿಕ್ ಬಸ್‌ಗಳಿಗೆ ಖಾಸಗಿ ಚಾಲಕರು ಬೇಡ, ಸಾರಿಗೆ ಸಂಸ್ಥೆಯ ಖಾಯಂ ಚಾಲಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡಿ ಎಂದಿದ್ದಾರೆ.

