ಬೆಂಗಳೂರು:ರಾಹುಲ್ ಗಾಂಧಿ ಕಾಂಗ್ರೆಸ್‌ಗೆ ಹೇಗೆ ಅನಿವಾರ್ಯವೋ ಅದೇ ರೀತಿ ಸಿದ್ದರಾಮಯ್ಯ ಸಹಾ ಎಂದು ಅವರ ಆಪ್ತ ಸಚಿವರು ಇಂದಿಲ್ಲಿ ಹೊಸ ರಾಗ ತೆಗೆದಿದ್ದಾರೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಎಂದರೆ ಕಾಂಗ್ರೆಸ್.., ಕಾಂಗ್ರೆಸ್ ಎಂದರೆ ಸಿದ್ದರಾಮಯ್ಯ, ಅವರಿಲ್ಲದೆ ಚುನಾವಣೆ ಎದುರಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ನಾಯಕತ್ವ ಬೇಕು
ನಿರ್ವಿವಿವಾದವಾಗಿ ಇಡೀ ರಾಜ್ಯಕ್ಕೆ ಸಿದ್ದರಾಮಯ್ಯ ನಾಯಕತ್ವ ಬೇಕು, ನಮಗೆ ಅವರ ನಾಯಕತ್ವ ಇಲ್ಲದೆ, ರಾಜಕೀಯ ಶೂನ್ಯವಾಗುತ್ತದೆ ಎಂದಿದ್ದಾರೆ.
ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಕಾಂಗ್ರೆಸ್‌ಗೆ ಗಾಂಧಿ ಕುಟುಂಬದಂತೆ ರಾಜ್ಯದಲ್ಲಿ ಸಿದ್ದರಾಮಯ್ಯ ಇಲ್ಲದೆ ಪಕ್ಷ ಇಲ್ಲ ಎಂದಿದ್ದಾರೆ.
ರಾಜಕಾರಣದಿಂದ ಅವರು ಹೊರಗೆ ಉಳಿಯಬಾರದು, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕು, ನಾವು ಮಾಡಿಸಿಯೇ ಮಾಡಿಸುತ್ತೇವೆ.
ನವೆಂಬರ್ ಕ್ರಾಂತಿಯೂ ಇಲ್ಲ
ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ, ಏನೂ ಇಲ್ಲ, ನಾಯಕತ್ವ ಬದಲಾವಣೆಯೂ ಇಲ್ಲ, ಸಿದ್ದರಾಮಯ್ಯ ಅವರೇ ಐದು ವರ್ಷ ಆಡಳಿತ ಪೂರ್ಣಗೊಳಿಸಲಿದ್ದು, ಅವರ ನಾಯಕತ್ವದಲ್ಲೇ ಮುಂದಿನ ವಿಧಾನಸಭಾ ಚುನಾವಣೆ ಎದುರಿಸುತ್ತೇವೆ.
ನಾಯಕತ್ವ ಬದಲಾವಣೆ ಮಾಡುವ ಅನಿವಾರ್ಯತೆ ರಾಜ್ಯದಲ್ಲಿ ಇಲ್ಲ ಎಂದಿರುವ ಸಂತೋಷ್ ಲಾಡ್, ಎರಡೂವರೆ ವರ್ಷಗಳ ಬಳಿಕ ಸಚಿವ ಸ್ಥಾನ ತ್ಯಾಗ ಮಾಡಬೇಕೆಂದು ಕೃಷ್ಣಬೈರೇಗೌಡ ಹೇಳಿರುವಂತೆ ನಮಗೇನೂ ಪ್ರೀ-ಕಂಡೀಷನ್ ಹಾಕಿಲ್ಲ.
ಮುಖ್ಯಮಂತ್ರಿ ಆಗಲಿ, ಪಕ್ಷದ ನಾಯಕರಾಗಲಿ ಕೇವಲ ಎರಡೂವರೆ ವರ್ಷ ಅಷ್ಟೇ ಅಧಿಕಾರ ಎಂದು ತಿಳಿಸಿಲ್ಲ, ಬೈರೇಗೌಡ ಅವರು ಯಾವ ಲೆಕ್ಕದ ಆಧಾರದ ಮೇಲೆ ಇಂತಹ ಹೇಳಿಕೆ ನೀಡಿದ್ದಾರೋ ತಿಳಿಯದು ಎಂದಿದ್ದಾರೆ.
ಬಿಹಾರ ಫಲಿತಾಂಶ ಪರಿಣಾಮ
ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶ ರಾಜ್ಯದ ನಾಯಕತ್ವದ ಮೇಲೂ ಪರಿಣಾಮ ಬೀರಬಹುದು.
ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನು ತನಗೆ ಬೇಕಾದ ರೀತಿ ದುರುಪಯೋಗ ಮಾಡಿಕೊಂಡು ಚುನಾವಣೆ ನಡೆಸುತ್ತಿದೆ, ಈ ಬಾರಿಯೂ ಅದೇ ರೀತಿ ನಡೆದರೆ ಬಿಹಾರ ಫಲಿತಾಂಶದ ಬಗ್ಗೆ ಏನೂ ಹೇಳಲಾಗದು, ನ್ಯಾಯಸಮ್ಮತ ಚುನಾವಣೆ ನಡೆದರೆ, ಬಿಜೆಪಿ ಮೈತ್ರಿ ಕೂಟ ಸೋಲುತ್ತದೆ ಎಂದರು.

