ಬೆಂಗಳೂರು:ಪೋಲಿಸ್ ಸಿಬ್ಬಂದಿ ಲಂಚ ಪಡೆದಿದ್ದು ಸಾಬೀತಾದರೆ ಅಂತಹವರನ್ನು ಸೇವೆಯಿಂದ ವಜಾ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ಮುಖ್ಯಮಂತ್ರಿ, ಪೋಲಿಸ್ ಅಧಿಕಾರಿಗಳ ಸಭೆಯಲ್ಲೇ ಈ ಕಟ್ಟಾದೇಶ ಮಾಡಿದ್ದೇವೆ, ಕೇವಲ ಗೃಹ ಇಲಾಖೆ ಅಲ್ಲದೆ, ಎಲ್ಲಾ ಸರ್ಕಾರಿ ನೌಕರರಿಗೂ ಈ ನಿಯಮ ಅನ್ವಯ ಆಗಲಿದೆ ಎಂದರು.
ತಕ್ಷಣ ಸಿಬ್ಬಂದಿ ಅಮಾನತು
ಲಂಚ ಪಡೆದ ಬಗ್ಗೆ ನನಗಾಗಲೀ ಅಥವಾ ಹಿರಿಯ ಅಧಿಕಾರಿಗಳಿಗಾಗಲೇ ಮಾಹಿತಿ ಬಂದ ತಕ್ಷಣ ಅಂತಹ ಸಿಬ್ಬಂದಿಯನ್ನು ಅಮಾನತು ಮಾಡಿ ಇಲಾಖಾ ತನಿಖೆ ನಡೆಸಲಾಗುವುದು.
ತನಿಖೆಯಲ್ಲಿ ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದ ವಜಾ ಮಾಡಲಾಗುತ್ತದೆ, ಈಗಾಗಲೇ ಇಂತಹ ಹಲವು ನಿದರ್ಶನಗಳಿವೆ, ಹಲವು ಮಂದಿ ಸರ್ಕಾರಿ ಸೇವೆಯನ್ನೂ ಕಳೆದುಕೊಂಡಿದ್ದಾರೆ ಎಂದರು.
ಭಾರತ್ ಪೆಟ್ರೋಲಿಯಂ ನಿಗಮದ ನಿವೃತ್ತ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಕೆ.ಶಿವಕುಮಾರ್, ತಮ್ಮ ಪುತ್ರಿ ಅಕ್ಷಯಾ ಮೆದುಳು ರಕ್ತಸ್ರಾವದಿಂದ ಬೆಂಗಳೂರಿನಲ್ಲಿ ಮೃತಪಟ್ಟಾಗ ಆಕೆಯ ಮೃತದೇಹ ಸಾಗಿಸಲು ಲಂಚ, ಮರಣೋತ್ತರ ಪರೀಕ್ಷೆ ನಡೆಸಲು ಲಂಚ, ಆಂಬ್ಯುಲೆನ್ಸ್ ಚಾಲಕ, ಪೋಲಿಸ್, ಸ್ಮಶಾನದ ಸಿಬ್ಬಂದಿಯಿಂದ ಅನುಭವಿಸಿದ ನೋವನ್ನು ತಮ್ಮ ಜಾಲತಾಣ ಖಾತೆಯಲ್ಲಿ ತೋಡಿಕೊಂಡಿದ್ದರು.
ಕಠಿಣ ಕ್ರಮಕ್ಕೆ ಸೂಚನೆ
ಈ ಘಟನೆ ಹಿನ್ನೆಲೆಯಲ್ಲಿ ಪೋಲಿಸ್ ಮಹಾನಿರ್ದೇಶಕರಿಗೆ ಲಂಚ ಪಡೆಯುವುದನ್ನು ತಡೆಯುವ ಮತ್ತು ಲಂಚ ಪಡೆದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಇಂದೂ ಸಹಾ ಸೂಚಿಸಿದ್ದೇನೆ.
ಪೋಲಿಸ್ ಸಿಬ್ಬಂದಿ ಲಂಚ ಪಡೆದರೆ ತಕ್ಷಣವೇ ಹಿರಿಯ ಅಧಿಕಾರಿಗಳು ಅಥವಾ ನಮ್ಮ ಗಮನಕ್ಕೆ ತನ್ನಿ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.
ಸಾರ್ವಜನಿಕರೂ ಸಹಾ ಗೃಹ ಇಲಾಖೆ ಜೊತೆ ಸೌಹಾರ್ದ ಸಂಬಂಧ ಇಟ್ಟುಕೊಂಡರೆ ಇಂತಹ ಘಟನೆಗಳನ್ನು ತಡೆಯಬಹುದಾಗಿದೆ ಎಂದರು.
ಒಳಮೀಸಲಾತಿಗೆ ಅನುಮೋದನೆ
ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿರುವ ವರದಿ ಮೇಲೆ ಪರಿಶಿಷ್ಟ ಸಮುದಾಯದ ಸಂಖ್ಯೆ ಆಧಾರಿಸಿ ಸರ್ಕಾರ ಒಳಮೀಸಲಾತಿಗೆ ಅನುಮೋದನೆ ನೀಡಿದೆ.
ಸುಗ್ರೀವಾಜ್ಞೆ ಮೂಲಕ ಸರ್ಕಾರಿ ಆದೇಶ ಅನುಷ್ಟಾನಗೊಳಿಸಬೇಕು, ಇದಕ್ಕೂ ಮುನ್ನ ಕಾನೂನು ತೊಡಕುಗಳನ್ನು ಸರಿಪಡಿಸಲು ಕಾನೂನು ವಿಭಾಗ ಕ್ರಮ ಕೈಗೊಳ್ಳುತ್ತಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಅನುಷ್ಟಾನ ಕುರಿತು ಚರ್ಚಿಸಿ ಎಲ್ಲರಿಗೂ ಸರ್ಕಾರ ಹಕ್ಕು ದೊರಕಿಸಲಿದೆ ಎಂದರು.

