ಅಣೆಕಟ್ಟು ನಿರ್ಮಾಣ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾ
ನವದೆಹಲಿ:ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯಕ್ಕೆ ಸಮಾನಾಂತರವಾಗಿ ಮೇಕೆ ದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದ ಕ್ರಮ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ.
ತಮಿಳುನಾಡಿನ ತಕರಾರು ಅರ್ಜಿ ವಜಾ ಹಿನ್ನೆಲೆಯಲ್ಲಿ ಮೇಕೆ ದಾಟು ಜಲಾಶಯ ನಿಮಾಣಕ್ಕೆ ಎದುರಾಗಿದ್ದ ದೊಡ್ಡ ಅಡ್ಡಿ ನಿವಾರಣೆ ಆಗಿದೆ.
ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯ್ ಆದೇಶ
ಕಳೆದ ಐದು ವರ್ಷಗಳ ಹಿಂದೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯ್ ನೇತೃತ್ವದ ಪೀಠ ಅರ್ಜಿ ವಜಾಗೊಳಿಸುವ ಮೂಲಕ ಕರ್ನಾಟಕದ ರೈತರು ಮತ್ತು ಜನತೆಗೆ ಶುಭ ಸಮಾಚಾರ ನೀಡಿದೆ.
ಮೂಲ ಅರ್ಜಿ ವಜಾಗೊಳ್ಳುತ್ತಿದ್ದಂತೆ, ಕುಡಿಯುವ ನೀರನ್ನು ವರ್ಗಾಯಿಸದಂತೆ ಕರ್ನಾಟಕಕ್ಕೆ ನಿರ್ದೇಶನ ಕೋರಿ ತಮಿಳುನಾಡು ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ಪುರಸ್ಕರಿಸಲು ನ್ಯಾಯಪೀಠ ನಿರಾಕರಿಸಿತು.
ಕಾವೇರಿ ಜಲಾನಯನ ಪ್ರದೇಶದ ನೀರಿನ ವಿವಾದವನ್ನು ಈ ನ್ಯಾಯಾಲಯ ಈಗಾಗಲೇ ಇತ್ಯರ್ಥಪಡಿಸಿದೆ, ಯಾವುದೇ ಸಮಸ್ಯೆಗಳಿದ್ದರೆ, ನೀವುಗಳು ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗದ ಮುಂದೆ ಅಹವಾಲು ಇಡಬಹುದು ಎಂದು ತಿಳಿಸಿದೆ.
ಕಾವೇರಿ ಜಲ ವಿವಾದ ಅರ್ಜಿ ತ್ವರಿತ ವಿಲೇವಾರಿ
ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಅರ್ಜಿ ಬಂದರೂ ತ್ವರಿತವಾಗಿ ವಿಲೇವಾರಿ ಮಾಡುವಂತೆಯೂ ಮೂರೂ ಸಂಸ್ಥೆಗಳ ಅಧಿಕಾರಿಗಳಿಗೆ ನ್ಯಾಯಪೀಠ ಸೂಚಿಸಿದೆ.
ನಿಮ್ಮ ಆಕ್ಷೇಪಣೆಗಳು ಏನಿದ್ದರೂ ಕಾವೇರಿ ಜಲ ವಿವಾದ ನಿರ್ವಹಣಾ ಅಧಿಕಾರಿಗಳ ಮುಂದಿಡಿ ಎಂದು ಹೇಳುವ ಮೂಲಕ ತಮಿಳುನಾಡು ಸರ್ಕಾರದ ತತ್‌ಕ್ಷಣದ ಅರ್ಜಿಯನ್ನೂ ನ್ಯಾಯಪೀಠ ತಿರಸ್ಕರಿಸಿತು.
ಜಲಾಶಯ ನಿರ್ಮಾಣ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ, ಮೇಕೆ ದಾಟು ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಯಾವುದೇ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.
ಯೋಜನೆ ತಜ್ಞ ಸಂಸ್ಥೆಗಳ ಪರಿಶೀಲನೆಯಲ್ಲಿ
ಈ ಯೋಜನೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗದಂತಹ ತಜ್ಞ ಸಂಸ್ಥೆಗಳ ಪರಿಶೀಲನೆಯಲ್ಲಿದೆ, ಹೀಗಾಗಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಪೀಠ ತಮಿಳುನಾಡು ಅರ್ಜಿಯನ್ನು ವಜಾಗೊಳಿಸಿತು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಂಗೀಕರಿಸಿದ ಆದೇಶದ ಪ್ರಕಾರ ಕೇವಲ ವಿಸ್ತೃತ ಯೋಜನಾ ವರದಿಯಷ್ಟೇ ಸಿದ್ಧವಾಗಿದೆ.
ಅರ್ಜಿದಾರರ ಆಕ್ಷೇಪಣೆಗಳನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ತಜ್ಞರು ಪರಿಗಣಿಸಿದ ನಂತರ ಕರ್ನಾಟಕ ಸರ್ಕಾರ ಡಿಪಿಆರ್ ಸಿದ್ಧಪಡಿಸಿದೆ.
ಡಿಪಿಆರ್ ಪರಿಗಣನೆ ಪೂರ್ವಾಪೇಕ್ಷಿತ
ಡಿಪಿಆರ್ ಪರಿಗಣನೆಗೆ ಎರಡೂ ಸಂಸ್ಥೆಗಳ ಪೂರ್ವಾನುಮೋದನೆ ಪೂರ್ವಾಪೇಕ್ಷಿತವಾಗಿರುತ್ತದೆ ಎಂಬ ಬಗ್ಗೆ ನಾವು ಗಮನಹರಿಸಬೇಕಿದೆ.
ಇದರಿಂದ ತಮಿಳುನಾಡು ತಕರಾರು ಅಪ್ರಸ್ತುತ ಎಂಬುದಾಗಿ ಭಾವಿಸಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

