ನವದೆಹಲಿ:ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಜನಪಥ್ 10, ನಿವಾಸದಲ್ಲಿ ಪುತ್ರ ರಾಹುಲ್ ಗಾಂಧಿ ಜೊತೆಗೂಡಿ, ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಹಾಗೂ ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ಕುರಿತು ಚರ್ಚಿಸಿದ್ದು, ಮಾತುಕತೆ ವಿವರ ಬಹಿರಂಗಗೊಂಡಿಲ್ಲ.
ಜನಪಥ್ 10, ನಿವಾಸದಲ್ಲಿ ಸಭೆ
ಖಾಸಗಿ ಕಾರ್ಯಕ್ರಮ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಂತೆ ಅವರನ್ನು ಸಂಪರ್ಕಿಸಿದ ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಜನಪಥ್ 10, ನಿವಾಸಕ್ಕೆ ಆಗಮಿಸುವಂತೆ ಸೂಚಿಸಿದರು.
ಸಿದ್ದರಾಮಯ್ಯ ಅಲ್ಲದೆ, ದೆಹಲಿಯಲ್ಲೇ ಇದ್ದ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಸಹಾ ಸೋನಿಯಾ ಗಾಂಧಿ ನಿವಾಸಕ್ಕೆ ಧಾವಿಸಿದರು.
ವಿದೇಶ ಪ್ರವಾಸ ಮುಂದೂಡಿರುವ ರಾಹುಲ್, ರಾಜಕೀಯ ಕಾರ್ಯದರ್ಶಿ ವೇಣುಗೋಪಾಲ್, ಸುರ್ಜೇವಾಲ ಹಾಗೂ ಕರ್ನಾಟಕ ಮತ್ತು ತೆಲಂಗಾಣ ಮುಖ್ಯಮಂತ್ರಿ ಜೊತೆಗೂಡಿ ಸೋನಿಯಾ ಅವರೊಂದಿಗೆ ಮಾತುಕತೆ ನಡೆಸಿದರು.
ಮಾತುಕತೆ ವಿವರ ಬಹಿರಂಗವಾಗಿಲ್ಲ
ನಾಲ್ಕು ಗೋಡೆಗಳ ಮಧ್ಯೆ ಮಧ್ಯಾನ್ಹ ೩ಕ್ಕೆ ನಡೆದ ಮಾತುಕತೆಯ ವಿವರ ಬಹಿರಂಗವಾಗಿಲ್ಲ, ಈ ಸಭೆಗೆ ಉಪಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಆಹ್ವಾನ ಇರಲಿಲ್ಲ, ಅವರು ದೆಹಲಿ ತಲುಪಿದ್ದೇ ಸಂಜೆ 4-15ಕ್ಕೆ.
ನವೆಂಬರ್ 20ಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಪೂರೈಸಲಿದ್ದು, ಉಳಿದ ಅವಧಿಗೆ ತಮಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಶಿವಕುಮಾರ್ ವರಿಷ್ಠರ ಮುಂದೆ ಪಟ್ಟು ಹಿಡಿದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಭರ್ಜರಿ ಜಯಗಳಿಸಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಜಿದ್ದಾಜಿದ್ದಿ ನಡೆದಿತ್ತು.
ಇದೇ ಅವಧಿಯಲ್ಲಿ ಮುಖ್ಯಮಂತ್ರಿ
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ್ದ ಸೋನಿಯಾ ಗಾಂಧಿ ಅವರು, ಶಿವಕುಮಾರ್ ಅವರಿಗೆ ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
ನವೆಂಬರ್ 20 ಸನಿಹವಾಗುತ್ತಿದ್ದಂತೆ ಎಐಸಿಸಿ ನಾಯಕರು ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

