ನವದೆಹಲಿ:ಕರ್ನಾಟಕದಲ್ಲಿ ಸರ್ಕಾರ ರಚನೆ ವೇಳೆ ತಮಗೆ ನೀಡಿರುವ ಭರವಸೆ ಈಡೇರಿಸುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.
ನವೆಂಬರ್-ಡಿಸೆಂಬರ್ ಒಳಗೆ ಮುಖ್ಯಮಂತ್ರಿ ಸ್ಥಾನ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಹಕ್ಕೋತ್ತಾಯ ಮಂಡನೆ
ಕಳೆದ ಮೂರು ದಿನಗಳಿಂದ ತಮ್ಮ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಜೊತೆ ದೆಹಲಿಯಲ್ಲೇ ಬಿಡಾರ ಹೂಡಿರುವ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಹಕ್ಕೋತ್ತಾಯ ಮಂಡಿಸಿದ್ದಾರೆ.
ಈ ನಾಯಕರ ಭೇಟಿಗೂ ಮುನ್ನ ಪಕ್ಷದ ಪ್ರಮುಖ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ದೆಹಲಿ-ಹರಿಯಾಣ ಗಡಿ ಭಾಗದಲ್ಲಿರುವ ಗುರುಗ್ರಾಮ್ ನಿವಾಸಕ್ಕೆ ತೆರಳಿ ಎರಡು ಬಾರಿ ಭೇಟಿ ಮಾಡಿ, ನಾಯಕತ್ವ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ.
ಪ್ರಿಯಾಂಕಾ ಭೇಟಿ ನಂತರವೇ ಖರ್ಗೆ ಹಾಗೂ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಅಧಿಕಾರ ಹಸ್ತಾಂತರ ಕುರಿತಂತೆ ಚರ್ಚೆ ನಡೆಸಿದರು.
ಭೇಟಿಗೆ ಅವಕಾಶ ಕೋರಿಕೆ
ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಭೇಟಿಗೆ ಸಮಯಾವಕಾಶ ಕೋರಿದ್ದರಾದರೂ ಸೋಮವಾರ ಸಂಜೆವರೆಗೂ ಸಮಯ ನೀಡಿರಲಿಲ್ಲ.
ರಾಜಗುರು ಡಾ.ದ್ವಾರಕನಾಥ್ ಸೇರಿದಂತೆ ತಮ್ಮ ನಂಬುಗೆಯ ಪೀಠ ನವೆಂಬರ್-ಡಿಸೆಂಬರ್‌ನಲ್ಲೇ ಮುಖ್ಯಮಂತ್ರಿ ಅಧಿಕಾರ ಸ್ಥಾನ ಪಡೆಯುವಂತೆ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸುರ್ಜೇವಾಲ ಮೂಲಕ ವೇಣುಗೋಪಾಲ್ ಮತ್ತು ಖರ್ಗೆ ಅವರನ್ನು ಭೇಟಿ ಮಾಡಿದ ಶಿವಕುಮಾರ್, ಅಧಿಕಾರ ಹಸ್ತಾಂತರಕ್ಕೆ ಒತ್ತಡ ಹೇರಿದ್ದಾರೆ.
ವರಿಷ್ಠರಿಗೆ ಸಿದ್ದರಾಮಯ್ಯ ಸಂದೇಶ
ಮುಖ್ಯಮಂತ್ರಿ ಸಿದ್ದರಾಮಯ್ಯ 2026ರ ಏಪ್ರಿಲ್-ಮೇ ವೇಳೆಗೆ ಅಧಿಕಾರ ಹಸ್ತಾಂತರಿಸುವ ಮಾಹಿತಿಯನ್ನು ಶಿವಕುಮಾರ್ ಮತ್ತು ವರಿಷ್ಠರಿಗೆ ಸಂದೇಶ ರವಾನಿಸಿದ್ದರು.
ಸಿದ್ದರಾಮಯ್ಯ ಸಂದೇಶಕ್ಕೆ ಒಪ್ಪಿಗೆ ಸೂಚಿಸಲು ಶಿವಕುಮಾರ್ ಮುಂದಾಗಿದ್ದರಾದರೂ, ಜ್ಯೋತಿಷಿಗಳು ಡಿಸೆಂಬರ್ ನಂತರ ಉನ್ನತ ಅಧಿಕಾರ ಯೋಗ ಲಭ್ಯ ಅವಕಾಶ ಕ್ಷೀಣವಾಗಿದ್ದು, ನೀವು ಇಚ್ಛಿಸಿರುವುದನ್ನು ಈ ವರ್ಷವೇ ಪಡೆದುಕೊಳ್ಳಿ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಲಾಬಿ
ಜ್ಯೋತಿಷ್ಯದ ಮೇಲೆ ನಂಬಿಕೆ ಹೊಂದಿರುವ ಶಿವಕುಮಾರ್ 2025ರಲ್ಲೇ ಅಧಿಕಾರ ಪಡೆಯಲು ದೆಹಲಿಯಲ್ಲಿ ತೀವ್ರ ಲಾಬಿ ನಡೆಸಿದ್ದಾರೆ.
ಉನ್ನತ ಮೂಲಗಳ ಪ್ರಕಾರ ಶಿವಕುಮಾರ್ ಸೋಮವಾರ ರಾತ್ರಿ ಬೆಂಗಳೂರಿಗೆ ಹಿಂತಿರುಗಿ, ಮಂಗಳವಾರ ಬೆಳಗ್ಗೆ ಮತ್ತೆ ದೆಹಲಿಗೆ ತೆರಳಲಿದ್ದಾರೆ, ಆದರೆ, ಅವರ ಸಹೋದರ ಸುರೇಶ್ ಮಾತ್ರ ಅಲ್ಲಿಯೇ ಬಿಡಾರ ಹೂಡಿದ್ದಾರೆ.

