ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿವಕುಮಾರ್ ಪರೋಕ್ಷ ಟಾಂಗ್
ಬೆಂಗಳೂರು:’ಪವರ್’ ವಿಚಾರ ಮುಖ್ಯ ಅಲ್ಲ, ಶ್ರಮಕ್ಕೆ ಫಲ ಸಿಗುತ್ತದೆ, ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ ಇದೆ, ಎಲ್ಲಿ ಭಕ್ತಿ ಇದೆಯೋ ಅಲ್ಲಿ ಫಲ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಆಧ್ಯಾತ್ಮಿಕ ದಾಟಿಯಲ್ಲಿ ವಿಶ್ಲೇಷಿಸಿದರು.
ಪಕ್ಷದ ಕಚೇರಿಯಲ್ಲಿ ಇಂದಿರಾ ಗಾಂಧಿ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿ 6ನೇ ವರ್ಷಕ್ಕೆ ಕಾಲಿಟ್ಟಿದ್ದೇನೆ, ಹಾಗೆಂದು ಇಲ್ಲಿ ಮೊಳೆ ಹೊಡೆದುಕೊಂಡು ಕುಳಿತಿರಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಅಧಿಕಾರಕ್ಕೆ ಅಂಟಿಕೊಂಡವರ ಬಗ್ಗೆ ಕುಟುಕಿದರು.
ಅಧಿಕಾರ ಹಸ್ತಾಂತರ
ಉಪಮುಖ್ಯಮಂತ್ರಿ ಆದ ತಕ್ಷಣವೇ ಕೆಪಿಸಿಸಿ ಹುದ್ದೆ ತ್ಯಜಿಸಬೇಕೆಂದಿದ್ದೆ ಆದರೆ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಮುಂದುವರೆಯಿರಿ ಎಂದರು, ಇಲ್ಲದಿದ್ದರೆ, ಅಂದೇ ಬೇರೆಯವರಿಗೆ ಅಧಿಕಾರ ಹಸ್ತಾಂತರ ಮಾಡುತ್ತಿದ್ದೆ.
ನಾನು ಅಧಿಕಾರದಲ್ಲಿ ಇರುತ್ತೇನೋ ಇಲ್ಲವೋ, ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಿ ಒತ್ತಿ ಹೇಳಿದರು.
ಯಾವುದೇ ಹುದ್ದೆಯಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ, ಇದು ನನಗೂ, ಇನ್ನೊಬ್ಬರಿಗೂ ಅನ್ವಯ ಆಗುತ್ತದೆ.
ಪಕ್ಷ ಮತ್ತೆ ಅಧಿಕಾರಕ್ಕೆ
ನಾನು ಎಲ್ಲಿ ಇರುತ್ತೇನೋ, ಎಲ್ಲಿ ಇರುವುದಿಲ್ಲವೋ ಎನ್ನುವುದು ಮುಖ್ಯವಲ್ಲ, 2028ಕ್ಕೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂಬುದೇ ನನ್ನ ಉದ್ದೇಶ ಎಂದು ಮುಖ್ಯಮಂತ್ರಿ ಕುರ್ಚಿಯನ್ನೇ ಮುಂದಿಟ್ಟುಕೊಂಡಂತೆ ಪರೋಕ್ಷವಾಗಿ ತಾವು ಏನು ಹೇಳಬೇಕೋ ಅದನ್ನು ಕಾರ್ಯಕರ್ತರ ಮುಂದೆ ಬಿಡಿಸಿಟ್ಟರು.
ಕಾಂಗ್ರೆಸ್ ಪಕ್ಷ ಮತ್ತು ಇಂದಿರಾ ಕುಟುಂಬಕ್ಕೆ ತಾವು ಇದುವರೆಗೂ ಸಲ್ಲಿಸಿರುವ ಸೇವೆಯನ್ನು ಮುಖ್ಯಮಂತ್ರಿ ಸಮ್ಮುಖದಲ್ಲೇ ಎಳೆ ಎಳೆಯಾಗಿ ಬಿಡಿಸಿಟ್ಟರು.
ಇಂದಿರಾ ಗಾಂಧಿ ಸಮಾದಿಗೆ ಗ್ರ್ಯಾನೈಟ್ ಕಳುಹಿಸಿ, ಹಾಕಿಸಿಕೊಟ್ಟವರೂ ನಾನು ಮತ್ತು ನನ್ನ ಸಹೋದರ, ಈ ಕಾರ್ಯಕ್ಕೆ ಸೋನಿಯಾ ಗಾಂಧಿ ಅವರೇ ಆದೇಶಿಸಿದ್ದರು, ನನ್ನ ಮತ್ತು ಆ ಕುಟುಂಬದ ನಡುವೆ ಇರುವುದು ಇಂತಹ ಭಾಂದವ್ಯ ಎಂದರು.
ಇಚ್ಛೆ ಬಂದಂತೆ ನಡೆದುಕೊಳ್ಳಲಿ
ಇದಕ್ಕೂ ಮುನ್ನ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಸ್ತಾಂತರ ವಿಷಯದಲ್ಲಿ ಖುಷಿ ಪಡುವವರು, ಅಳುವವರು, ದುಃಖ ಪಡುವವರು ಅವರ ಇಚ್ಛೆಯಂತೆ ನಡೆದುಕೊಳ್ಳಲಿ ಎಂದು ಮಾರ್ಮಿಕವಾಗಿ ನುಡಿದರು.
ದೆಹಲಿಯಲ್ಲಿ ಪಕ್ಷದ ಅಧಿನಾಯಕರ ಭೇಟಿ ಸಾಧ್ಯವಾಗಲಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಮಾಧ್ಯಮಗಳಿಗೆ ಒಳ್ಳೆಯ ಆಹಾರ ಸಿಗುತ್ತಿದೆ, ನೋಡ್ರೀ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ನನ್ನ ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ, ಒಳ ವಿಚಾರಗಳನ್ನು ಅರಿಯದೆ, ಮನ ಬಂದಂತೆ ಬರೆಯುವುದು ಎಷ್ಟರ ಮಟ್ಟಿಗೆ ಸರಿ.
ನಿಮಗೆ ಇದರಿಂದ ಸಂತೋಷವಾಗುತ್ತದೆ, ಬರೆದಿದ್ದನ್ನು ಓದಿದ ಕೆಲವರಿಗೆ ಆನಂದವೂ ಆಗಬಹುದು, ದುಃಖವೂ ಆಗಬಹುದು, ಯಾರು ಯಾವ ರೀತಿ ಅನುಭವ ಪಡೆದುಕೊಳ್ಳುತ್ತಾರೋ ಪಡೆದುಕೊಳ್ಳಲಿ.
ತಲೆ ಕೆಡಿಸಿಕೊಳ್ಳುವುದಿಲ್ಲ
ಹೊಗಳುವುದೂ, ತೆಗಳುವುದೂ ನನ್ನ ಜೀವನದಲ್ಲಿ ನಡೆದುಕೊಂಡು ಬಂದಿದೆ, ಇದಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ, ಪಕ್ಷ ಸಂಘಟನೆಯಲ್ಲಿ ಹೇಗಿದ್ದೇನೆಯೋ ಹಾಗೆಯೇ ಮುಂದುವರೆದುಕೊಂಡು ಹೋಗುತ್ತೇನೆ.
ಒಮ್ಮೆ ಹೊರತುಪಡಿಸಿ, ಉಳಿದೆಲ್ಲ ಸಂದರ್ಭದಲ್ಲೂ ಪಕ್ಷ ನನ್ನ ಕೈ ಹಿಡಿದಿದೆ, ಶಾಸಕನಾಗಿ, ರಾಜ್ಯಾಧ್ಯಕ್ಷನಾಗಿ, ಸಚಿವನಾಗಿ, ಉಪಮುಖ್ಯಮಂತ್ರಿ ಅಧಿಕಾರವೂ ನೀಡಿದೆ.
ಮುಂದೆ ನನಗೆ ಏನು ದೊರೆಯಬೇಕೋ ಅದನ್ನು ಪಕ್ಷ ನೀಡುತ್ತದೆ, ಹಾದಿಬೀದಿಯಲ್ಲಿ ಹೇಳಿದಂತೆಲ್ಲಾ ನಮ್ಮಲ್ಲಿ ನಡೆಯುವುದಿಲ್ಲ ಎಂದು ಅರ್ಥಗರ್ಭಿತವಾಗಿ ಹೇಳಿದರು.

