ಚಾಮರಾಜನಗರ:ಯಾವ ಕ್ರಾಂತಿಯೂ ಇಲ್ಲ, ಬ್ರಾಂತಿಯೂ ಇಲ್ಲ, ನನ್ನ ಅಧಿಕಾರ ಈಗಲೂ, ಭವಿಷ್ಯದಲ್ಲಿಯೂ ಭದ್ರ, ಜನಾಶೀರ್ವಾದ ಇರುವವರೆಗೂ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ನವೆಂಬರ್ ಕ್ರಾಂತಿಯ ಬಗ್ಗೆ ಅನವಶ್ಯಕ ಚರ್ಚೆ ನಡೆಯುತ್ತಿದೆ, ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಇಲ್ಲ ಎಂದರು.
ಸ್ವಪಕ್ಷಿಗರಿಗೂ ತಿರುಗೇಟು
ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿಯಾಗುತ್ತದೆ, ನಾಯಕತ್ವ ಬದಲಾವಣೆ ಆಗಲಿದೆ ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದ ಬಿಜೆಪಿ ನಾಯಕರಿಗೆ ಮತ್ತು ಪರೋಕ್ಷವಾಗಿ ನಾಯಕತ್ವ ಬದಲಾವಣೆ ಬಯಸುತ್ತಿದ್ದ ಸ್ವಪಕ್ಷಿಗರಿಗೂ ತಿರುಗೇಟು ನೀಡಿದರು.
ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಇಲ್ಲ, ಒಟ್ಟು 34 ಸಚಿವರ ಸ್ಥಾನವಿದ್ದು, ಅದರಲ್ಲಿ ಎರಡು ಸ್ಥಾನಗಳು ಖಾಲಿಯಿದೆ, ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಈ ಖಾಲಿ ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುವುದು.
ಸಂಪುಟ ಪುನಾರಚನೆ ಬಗ್ಗೆಕಮಾಂಡ್ ಬಳಿ ಇನ್ನು ಚರ್ಚಿಸಬೇಕು, ಆದರೆ ಸದ್ಯಕ್ಕಂತೂ ಸಚಿವ ಸಂಪುಟ ಪುನಾರಚನೆ ಕುರಿತು ಪ್ರಸ್ತಾಪ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲ ಜಿಲ್ಲೆಗಳಿಗೆ ಭೇಟಿ
ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆ, ಮೂಢನಂಬಿಕೆ ಮತ್ತು ಕಂದಾಚಾರಗಳಲ್ಲಿ ನಂಬುವುದಿಲ್ಲ, ಆದ್ದರಿಂದ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವೆ, ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಸಮಾನವಾಗಿ ಕಂಡು, ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ, ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರವಾಗಿರುತ್ತದೆ ಎಂದರು.
ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಬಗ್ಗೆ ಮಾಡಿದ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಐದು ವರ್ಷ ಆಡಳಿತ ನಡೆಸಲು ಜನಾದೇಶ ಇದೆ.
ಪುನಃ ಕಾಂಗ್ರೆಸ್ ಆಯ್ಕೆ
ನವೆಂಬರ್ ಕ್ರಾಂತಿ ಎಂಬುದು ಮಾಧ್ಯಮದ ಸೃಷ್ಟಿಸಿ, ಜನರ ಆಸೆಯಂತೆ ಐದು ವರ್ಷ ನಂತರ ಪುನಃ ಕಾಂಗ್ರೆಸ್ ಆಯ್ಕೆಯಾಗಲಿದೆ.
೨೦೨೮ರಲ್ಲಿಯೂ ತಮ್ಮ ನೇತೃತ್ವದಲ್ಲಿ ಚುನಾವಣೆ ಎದುರಿಸುವ ಬಗ್ಗೆ ಭವಿಷ್ಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು, ಜನರು ಎಲ್ಲಿವರೆಗೆ ಅಪೇಕ್ಷಿಸುವರೋ, ಅಲ್ಲಿಯವೆಗೆ ನಾನೇ ಬಜೆಟ್ ಮಂಡಿಸುತ್ತೇನೆ ಎಂದರು.

