ಶಿವಕುಮಾರ್ ಟ್ವೀಟ್‌ನಿಂದ ರಾಜಕೀಯ ವಲಯದಲ್ಲಿ ಕುತೂಹಲ
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ನಡೆದಿರುವ ಅಧಿಕಾರ ಹಸ್ತಾಂತರ ಗುದ್ದಾಟ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಪೋಸ್ಟ್ ಆಗಿರುವ ’ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ’ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಶಿವಕುಮಾರ್ ಸಾರ್ವಜನಿಕ ಸಭೆಯಲ್ಲಿ ಇಂತಹ ಹೇಳಿಕೆ ನೀಡಿದ ಬೆನ್ನಲ್ಲೇ ಇಂದು ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಕಾಣಿಸಿಕೊಂಡಿದೆ.
ಮಾತು ಉಳಿಸಿಕೊಳ್ಳುವುದು ಮುಖ್ಯ
ಜಗತ್ತಿನ ದೊಡ್ಡ ಶಕ್ತಿ ಎಂದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ನ್ಯಾಯಾಧೀಶರಾಗಲೀ, ಅಧ್ಯಕ್ಷರಾಗಲೀ, ನಾನಾಗಲೀ, ಬೇರೆ ಯಾರೇ ಆಗಿರಲಿ, ಎಲ್ಲರೂ ನುಡಿದಂತೆ ನಡೆಯಬೇಕು, ಮಾತು ಉಳಿಸಿಕೊಳ್ಳುವುದು ಮುಖ್ಯ ಎಂದು ಸಿದ್ದರಾಮಯ್ಯ ಅವರಿಗೆ ’ಎಕ್ಸ್’ನಲ್ಲಿ ನೆನಪು ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತ ಎರಡೂವರೆ ವರ್ಷ ಪೂರೈಸುತ್ತಿದ್ದಂತೆ ಅಧಿಕಾರ ಹಸ್ತಾಂತರ ಹಾಗೂ ಸಂಪುಟ ಪುನರ್ ರಚನೆ ಚರ್ಚೆಗಳು ಮುನ್ನೆಲೆಗೆ ಬಂದು ಎರಡು ಬಣಗಳ ನಡುವೆ ಭಾರೀ ಜಟಾಪಟಿ ನಡುವೆಯೇ ಇಂತಹ ಪೋಸ್ಟ್ ಕಾಣಿಸಿಕೊಂಡಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಮುಖ್ಯಮಂತ್ರಿ ಗಾದಿಗೆ ಭಾರೀ ಪೈಪೋಟಿ ನಡೆದಿತ್ತು.
ತಲಾ 30 ತಿಂಗಳ ಆಡಳಿತ ಸೂತ್ರ
ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಅಂದು ಸಂಸದರಾಗಿದ್ದ ಡಿ.ಕೆ.ಸುರೇಶ್ ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸಮ್ಮುಖದಲ್ಲೇ ಉಭಯ ನಾಯಕರು ತಲಾ 30 ತಿಂಗಳ ಆಡಳಿತ ಸೂತ್ರಕ್ಕೆ ಒಪ್ಪಿಕೊಂಡಿದ್ದರು.
ಸೂತ್ರ ಜಾರಿ ನಂತರ ಸಭೆಯಲ್ಲೇ ಇದ್ದ ಸುರೇಶ್, ಇದನ್ನು ಮಾಧ್ಯಮದ ಮುಂದೆ ಬಹಿರಂಗ ಪಡಿಸೋಣ ಎಂದಾಗ, ಸಿದ್ದರಾಮಯ್ಯ, ಅವರ ಹೆಗಲ ಮೇಲೆ ಕೈಹಾಕಿ, ಇಂತಹ ವಿಷಯಗಳನ್ನೆಲ್ಲಾ ಪತ್ರಿಕೆಗಳ ಮುಂದೆ ತರಬಾರದು.
ಕುರ್ಚಿ ಬಿಟ್ಟು ಹೋಗುತ್ತೇನೆ
ನಾನು, ನಿನಗೆ ಮಾತು ಕೊಡುತ್ತೇನೆ, 30 ತಿಂಗಳ ಆಡಳಿತ ಮುಗಿಯುವುದಕ್ಕೆ ಒಂದು ವಾರದ ಹಿಂದೆಯೇ ಕುರ್ಚಿ ಬಿಟ್ಟು ಎದ್ದು ಹೋಗುತ್ತೇನೆ ಎಂದು ಸಿದ್ದರಾಮಯ್ಯ ಎಲ್ಲರ ಸಮ್ಮುಖದಲ್ಲೇ ಭರವಸೆ ನೀಡಿದ್ದರು.
ನವೆಂಬರ್ 20ಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎರಡೂವರೆ ಪೂರ್ಣಗೊಳ್ಳುತ್ತಿದ್ದಂತೆ, ಡಿ.ಕೆ.ಸುರೇಶ್ ಪತ್ರಿಕಾಗೋಷ್ಠಿ ಕರೆದು ಕೊಟ್ಟ ಭರವಸೆಯಂತೆ ನಡೆದುಕೊಳ್ಳಬೇಕೆಂದು ನೆನಪಿಸಿದ್ದರು.
ಸುರೇಶ್ ಹೇಳಿಕೆ ನೀಡಿದ ಬೆನ್ನಲ್ಲೇ ಅಧಿಕಾರ ಹಸ್ತಾಂತರದ ಜಟಾಪಟಿ ಬಹಿರಂಗವಾಗಿ ಬೀದಿಗೆ ಬಂದು, ಇದೀಗ ವರಿಷ್ಠರು ಮಧ್ಯಪ್ರವೇಶ ಮಾಡಿದ್ದಾರೆ.

