ಬೆಂಗಳೂರು:ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಯಾವಾಗ ಹೇಳುವರೋ ಆವಾಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದಾಶಿವನಗರದ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಉಪಹಾರ ಕೂಟದಲ್ಲಿ ಭಾಗವಹಿಸಿದ ನಂತರ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಕುರಿತಂತೆ ಪಕ್ಷದ ವರಿಷ್ಠರು ರಾಹುಲ್ ಗಾಂಧಿ ಏನು ತೀರ್ಮಾನ ಮಾಡುತ್ತಾರೋ ಅದರಂತೆ ನಾವು ನಡೆದುಕೊಳ್ಳುತ್ತೇವೆ.
ಇಬ್ಬರೂ ದೆಹಲಿಗೆ ಹೋಗಲು ತೀರ್ಮಾನ
ಡಿಸೆಂಬರ್ 8ರಂದು ಇಬ್ಬರೂ ದೆಹಲಿಗೆ ಹೋಗಲು ತೀರ್ಮಾನ ಮಾಡಿದ್ದೇವೆ, ಪ್ರವಾಸ ಸಂದರ್ಭದಲ್ಲಿ ವರಿಷ್ಠರು ಅವಕಾಶ ನೀಡಿದರೆ ಭೇಟಿ ಮಾಡುತ್ತೇವೆ.
ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬುಧವಾರ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರಿಗೆ ಬರುತ್ತಿದ್ದಾರೆ, ಆ ಸಂದರ್ಭದಲ್ಲಿ ನಾನು ಭೇಟಿ ಮಾಡುವುದಾಗಿ ತಿಳಿಸಿದರು.
ಮೇಕೆದಾಟು ಸೇರಿದಂತೆ ರಾಜ್ಯದ ಹಲವು ಯೋಜನೆಗಳಿಗೆ ಕೇಂದ್ರದ ಅನುಮತಿ ದೊರಕಿಸಿಕೊಳ್ಳಬೇಕಿದ್ದು, ಈ ಸಲುವಾಗಿ ರಾಜ್ಯ ಪ್ರತಿನಿಧಿಸುವ ಕೇಂದ್ರದ ಸಚಿವರೂ ಮತ್ತು ಸಂಸದರ ಸಭೆಯನ್ನು ಡಿಸೆಂಬರ್ 8ರಂದು ದೆಹಲಿಯಲ್ಲಿ ನಡೆಸಲು ತೀರ್ಮಾನಿಸಿದ್ದೇವೆ.
ಸಮಯ ನೀಡಿದರೆ ವರಿಷ್ಠರ ಭೇಟಿ
ಈ ಸಂದರ್ಭದಲ್ಲಿ ವರಿಷ್ಠರು ಸಮಯ ನೀಡಿದರೆ ಭೇಟಿ ಮಾಡಿ ಅಂದೇ ರಾಜ್ಯಕ್ಕೆ ಹಿಂತಿರುಗಲು ಇಂದಿನ ಮಾತುಕತೆ ವೇಳೆ ನಿರ್ಧರಿಸಿದ್ದೇವೆ ಎಂದರು.
ಶಿವಕುಮಾರ್ ಆಹ್ವಾನದ ಮೇರೆಗೆ ಬೆಳಗಿನ ಉಪಹಾರಕ್ಕಾಗಿ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಕಾಂಗ್ರೆಸ್ ಪಕ್ಷದ ವಿಚಾರಗಳನ್ನು ಈ ಭೇಟಿಯಲ್ಲಿ ಚರ್ಚಿಸಲಾಗಿದೆ.
ಡಿಸೆಂಬರ್ 8 ರಂದು ಬೆಳಗಾವಿ ಅಧಿವೇಶನ ಪ್ರಾರಂಭವಾಗಲಿದ್ದು, ವಿರೋಧ ಪಕ್ಷಗಳನ್ನು ಎದುರಿಸಲು ಸರ್ಕಾರದ ರಣನೀತಿ ಬಗ್ಗೆ ಇಂದು ಚರ್ಚಿಸಲಾಗಿದೆ, ಅವರು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿದ್ದಾರೆ ಎಂಬ ಮಾಹಿತಿ ಪತ್ರಿಕೆಗಳಿಂದ ತಿಳಿದು ಬಂದಿದೆ, ಅಲ್ಲದೇ ಅವರು ಎತ್ತಬಹುದಾದ ವಿಚಾರಗಳನ್ನು ಸಮರ್ಥವಾಗಿ ಸರ್ಕಾರ ಎದುರಿಸಲಿದೆ.
ಸಮಸ್ಯೆಗಳಿಗೆ ಪರಿಹಾರ ಯತ್ನ
ಕಬ್ಬು, ಮೆಕ್ಕೆಜೋಳ ಸೇರಿದಂತೆ ರಾಜ್ಯದ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಪ್ರಯತ್ನಿಸಲಾಗುವುದು ಎಂದರು.
ನಮ್ಮ ಸರ್ಕಾರ ರೈತಪರ ನಿಲುವು ಹೊಂದಿದೆ, ಕಬ್ಬು ಬೆಲೆ ನಿಗದಿಗೆ ಸಂಬಂಧಿಸಿದಂತೆ ರೈತರು, ರೈತ ಮುಖಂಡರು, ಕಾರ್ಖಾನೆ ಮಾಲೀಕರ ಜೊತೆ ಚರ್ಚಿಸಿ, ಸಮಸ್ಯೆ ಪರಿಹಾರಕ್ಕೆ ಅಂತಿಮ ರೂಪ ನೀಡಲಾಗಿದೆ.
ಒಂದು ಟನ್ ಕಬ್ಬಿಗೆ ಸರ್ಕಾರದಿಂದ ಹೆಚ್ಚುವರಿಯಾಗಿ 50 ರೂ. ನಿಗದಿಪಡಿಸಲಾಗಿದೆ, ಮೆಕ್ಕೆಜೋಳ ಖರೀದಿ ಬಗ್ಗೆ ರೈತರು, ಡಿಸ್ಟಲರಿ ಕಾರ್ಖಾನೆ ಮಾಲೀಕರ ಜೊತೆ ಚರ್ಚಿಸಲಾಗಿದೆ, ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 2,400 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ, ಆದರೆ, ಮಾರುಕಟ್ಟೆ ದರ 1,900 ರಿಂದ 2,100 ರೂ.ವರೆಗೆ ಇರುವುದರಿಂದ ಡಿಸ್ಟಲರಿಗಳು, ಎಂಎಸ್‌ಪಿ ದರದಲ್ಲಿಯೇ ಮೆಕ್ಕೆಜೋಳ ಖರೀದಿಸಬೇಕೆಂದು ಮನವೊಲಿಸಲಾಗುತ್ತಿದೆ, ಪೌಲ್ಟ್ರಿ ಫಾರಂಗಳು, ಪಶು ಆಹಾರಗಳಿಗೂ ಮೆಕ್ಕೆ ಜೋಳ ಖರೀದಿಸಲು ಸೂಚಿಸಲಾಗಿದೆ ಎಂದರು.

