ಬೆಂಗಳೂರು:ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ.
ಕಳೆದ ಎರಡು ದಿನಗಳಿಂದ ತಮ್ಮ ದಿನಚರಿಯಲ್ಲಿ ಯಾವುದೇ ಕಾರ್ಯಕ್ರಮ ನಮೂದಿಸದೆ, ಸೋನಿಯಾ ಗಾಂಧಿ ಭೇಟಿ ಸಮಯಕ್ಕಾಗಿ ಶಿವಕುಮಾರ್ ಕಾದಿದ್ದರು.
ದೆಹಲಿಯಲ್ಲಿಯೇ ವಾಸ್ತವ್ಯ
ದೆಹಲಿಯಿಂದ ಮಾಹಿತಿ ಬರುತ್ತಿದ್ದಂತೆ ಮದುವೆ ನೆಪ ಮುಂದೊಡ್ಡಿ ಬುಧವಾರ ಮಧ್ಯಾನ್ಹ ದೆಹಲಿಗೆ ತೆರಳಿ, ಅಲ್ಲಿಯೇ ವಾಸ್ತವ್ಯ ಹೂಡಿದ್ದು, ನಾಳೆ ಹಿಂತಿರುಗುವ ಸಾಧ್ಯತೆ ಇದೆ.
ಇದರ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಪ್ರವಾಸ ಸಂದರ್ಭದಲ್ಲೇ ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಅಲ್ಲಿನ ಕಾವೇರಿ ಅತಿಥಿ ಗೃಹದಲ್ಲಿ ಭೇಟಿ ಮಾಡಿ ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಮುಖಾಮುಖಿ ಚರ್ಚೆ ಮಾಡಿದ್ದಾರೆ.
ಕಳೆದ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಉಪಹಾರ ಕೂಟದ ನಂತರ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದಲ್ಲಿ, ವರಿಷ್ಠರ ಆಹ್ವಾನ ಇಲ್ಲದೆ ದೆಹಲಿಗೆ ತೆರಳುವುದಿಲ್ಲ ಎಂದಿದ್ದರು.
ವರಿಷ್ಠರ ಭೇಟಿಗೆ ಯತ್ನ
ಮುಖ್ಯಮಂತ್ರಿ ಮತ್ತು ನಾನು ಡಿಸೆಂಬರ್ ೮ರಂದು ದೆಹಲಿಗೆ ತೆರಳಿ ರಾಜ್ಯ ಪ್ರತಿನಿಧಿಸುವ ಸಂಸದರೊಂದಿಗೆ ಸಭೆ ನಡೆಸಲಿದ್ದು, ಈ ಸಂದರ್ಭದಲ್ಲಿ ಅವಕಾಶ ನೀಡಿದರೆ ವರಿಷ್ಠರನ್ನು ಭೇಟಿ ಮಾಡುವುದಾಗಿ ಹೇಳಿದ್ದರು.
ನಿನ್ನೆ ರಾತ್ರಿ ಅವರ ಕಚೇರಿಯಿಂದ ಬಂದ ದೈನಂದಿನ ಕಾರ್ಯಕ್ರಮ ಸಂಪೂರ್ಣವಾಗಿ ಕಾಯ್ದಿರಿಸಲಾಗಿತ್ತು, ಆದರೆ, ಇಂದು ದಿಢೀರನೆ ದೆಹಲಿಗೆ ತೆರಳಿದರು.
ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ನೀಡಿರುವ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿದ್ದು, ಅವರನ್ನು ಗೌಪ್ಯವಾಗಿ ಭೇಟಿ ಮಾಡಿ, ಅಧಿಕಾರ ಹಸ್ತಾಂತರ ಕುರಿತು ಸಮಾಲೋಚನೆ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅಧಿಕಾರ ಹಸ್ತಾಂತರ ಬಿಕ್ಕಟ್ಟು
ಸಿದ್ದರಾಮಯ್ಯ ಆಡಳಿತ ನವೆಂಬರ್ 20ಕ್ಕೆ ಎರಡೂವರೆ ವರ್ಷ ಪೂರೈಸಿದ ಬೆನ್ನಲ್ಲೇ ಅಧಿಕಾರ ಹಸ್ತಾಂತರ ಗರಿಗೆದರಿ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವಿನ ಅಧಿಕಾರ ಹಸ್ತಾಂತರ ಗೊಂದಲಕ್ಕೆ ತೆರೆ ಎಳೆಯಲು ನಡೆಸಿದ ಯತ್ನವೂ ಫಲಪ್ರದವಾಗಲಿಲ್ಲ.
ಶಿವಕುಮಾರ್ ಬೆಂಬಲಿತ ಶಾಸಕರು ದೆಹಲಿ ದಂಡಯಾತ್ರೆ ಕೈಗೊಂಡರೆ, ಮತ್ತೊಂದೆಡೆ ಒಕ್ಕಲಿಗ ಮತ್ತು ವೀರಶೈವ ಮಠಾಧೀಶರು ಉಪಮುಖ್ಯಮಂತ್ರಿ ಬೆಂಬಲಕ್ಕೆ ನಿಂತರು.
ತಾತ್ಕಾಲಿಕ ಶಮನ
ಅಧಿಕಾರ ಹಸ್ತಾಂತರ ವಿಷಯ ಗೊಂದಲಕ್ಕೆ ಕಾರಣವಾಗಿ ಸರ್ಕಾರಕ್ಕೆ ತೊಂದರೆ ಆಗುವುದೆಂಬ ಉದ್ದೇಶದಿಂದ ವೇಣುಗೋಪಾಲ್ ಮಧ್ಯಪ್ರವೇಶ ಮಾಡಿ ಉಭಯ ನಾಯಕರ ಮನೆಯಲ್ಲೂ ಉಪಹಾರ ಕೂಟ ನಡೆಸುವುದರ ಮೂಲಕ ತಾತ್ಕಾಲಿಕ ಶಮನ ಮಾಡಿದ್ದರು.
ಮಂಗಳವಾರ ಶಿವಕುಮಾರ್ ನಿವಾಸದಲ್ಲಿ ನಡೆದ ಉಪಹಾರ ಕೂಟ ಮುಗಿಯುತ್ತಿದ್ದಂತೆ ಅಧಿಕಾರ ಉಳಿಸಿಕೊಳ್ಳುವ ಹಾಗೂ ಪಡೆಯುವ ತೆರೆಮರೆಯ ಕಸರತ್ತನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಆರಂಭಿಸಿದ್ದಾರೆ.

