ಬೆಂಗಳೂರು:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಜನವರಿ 6 ಇಲ್ಲವೇ 9ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಆಪ್ತ ಶಾಸಕ ಇಕ್ಬಾಲ್ ಹುಸೇನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಶಿವಕುಮಾರ್ ಅವರಿಗೆ 6 ಅದೃಷ್ಟದ ಸಂಖ್ಯೆ, ಅವರು ಯಾವುದೇ ಕಾರ್ಯಗಳನ್ನಾಗಲಿ ಈ ಸಂಖ್ಯೆಯನ್ನೇ ಮುಂದಿಟ್ಟುಕೊಂಡು ಕಾರ್ಯ ಮಾಡುತ್ತಾರೆ ಎಂದರು.
ಸಿದ್ದರಾಮಯ್ಯ ಅವಕಾಶ ಮಾಡಿಕೊಡಬೇಕು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ತ್ಯಜಿಸಿ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕು.
ವರಿಷ್ಠರು ಈಗಾಗಲೇ ಶಿವಕುಮಾರ್ ಪರ ಸ್ಪಂದಿಸಿದ್ದಾರೆ, ಇನ್ನೇನಿದ್ದರೂ ಅವರು ಅಧಿಕಾರ ಪಡೆಯುವುದಷ್ಟೇ ಬಾಕಿ, ಕೊನೆಗೂ ಅವರ ಹೋರಾಟಕ್ಕೆ ಪ್ರತಿಫಲ ಸಿಗುತ್ತಿದೆ ಎಂದರು.
ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ನಾವೆಲ್ಲರೂ ಒಂದೇ, ದೆಹಲಿಯಲ್ಲಿ ನಡೆಯುವ ಪಕ್ಷದ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಹೋಗುತ್ತೇವೆ.
ಬೇಡಿಕೆ ಇಟ್ಟಿದ್ದೇವೆ
ದೆಹಲಿ ಭೇಟಿ ಸಂದರ್ಭದಲ್ಲಿ ವರಿಷ್ಠರ ಭೇಟಿ ಮಾಡುವ ಉದ್ದೇಶ ಇಲ್ಲ, ಈಗಾಗಲೇ ಭೇಟಿ ಮಾಡಿ ನಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದೇವೆ, ಅದಕ್ಕೆ ಅವರೂ ಸ್ಪಂದಿಸಿದ್ದಾರೆ.
ಇನ್ನು ಪಟ್ಟಾಭಿಷೇಕವಷ್ಟೇ ಆಗಬೇಕು, ಅದಕ್ಕಾಗಿ ನಾವೆಲ್ಲಾ ಕಾಯುತ್ತಿದ್ದೇವೆ, ನನಗೆ ತಿಳಿದಿರುವ ಪ್ರಕಾರ ಜನವರಿ 6ರಂದೇ ಮುಖ್ಯಮಂತ್ರಿಯಾಗಿ ಅಧಿಕಾರ ಗ್ರಹಣ ಮಾಡುವುದು ಶೇಕಡ 99ರಷ್ಟು ಖಚಿತ ಎಂದರು.
ಅಧಿಕಾರ ಹಂಚಿಕೆ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ಶಿವಕುಮಾರ್ ಪರ ಮೊದಲ ಧ್ವನಿ ಎತ್ತಿದ್ದೇ ಶಾಸಕರಾದ ಇಕ್ಬಾಲ್ ಹುಸೇನ್ ಮತ್ತು ಶಿವಗಂಗಾ, ಇದಕ್ಕೆ ಪ್ರತಿಯಾಗಿ ಕೆಪಿಸಿಸಿ ಎಚ್ಚರಿಕೆ ನೋಟಿಸ್ ನೀಡಿತ್ತು.
ನಾಯಕನ ಬೆಂಬಲಿಸಿ ಹೇಳಿಕೆ
ಇತ್ತೀಚೆಗೆ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ, ನಮ್ಮ ತಂದೆ ಐದು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತಾರೆಂದು ಬಹಿರಂಗವಾಗಿ ಹೇಳಿಕೆ ನೀಡಿದ ನಂತರ ಶಿವಕುಮಾರ್ ಬಣಕ್ಕೆ ಸೇರಿದ ಶಾಸಕರು, ತಮ್ಮ ನಾಯಕನನ್ನು ಬೆಂಬಲಿಸಿ ನಿತ್ಯ ಹೇಳಿಕೆ ನೀಡಲು ಆರಂಭಿಸಿದ್ದಾರೆ.
ಅದರಲ್ಲೂ ಇಕ್ಬಾಲ್ ಮತ್ತು ಶಿವಗಂಗಾ ಅವರುಗಳು ಶಿವಕುಮಾರ್ ಅವರಿಗೆ ವರಿಷ್ಠರಿಂದ ಬಂದ ಸಂದೇಶಗಳನ್ನೂ ಬಹಿರಂಗ ಮಾಡುತ್ತಿದ್ದಾರೆ.

