ಬೆಳಗಾವಿ ಹೊರವಲಯ:ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಎಷ್ಟೇ ಪ್ರಚೋದನೆ ಮಾಡಿದರೂ ಅದಕ್ಕೆ ಪ್ರತಿಕ್ರಿಯಿಸದಿರಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಬೆಂಬಲಿತ ಸಚಿವರು, ಶಾಸಕರಿಗೆ ಕಿವಿಮಾತು ಹೇಳಿರುವುದಲ್ಲದೆ, ಸಂಕ್ರಾಂತಿ ವೇಳೆಗೆ ಬೆಲ್ಲದ ರುಚಿ ದೊರೆಯುವ ಮುನ್ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬುಧವಾರ ರಾತ್ರಿ ತಮ್ಮ ಆಪ್ತ ಸಚಿವರು, ಶಾಸಕರಿಗೆ, ಕಾಂಗ್ರೆಸ್‌ನ ಮಾಜಿ ಶಾಸಕ ಫಿರೋಜ್ ಸೇಠ್ ನಿವಾಸದಲ್ಲಿ ಬೋಜನಕೂಟ ಏರ್ಪಡಿಸಿದ ಬೆನ್ನಲ್ಲೇ ಶಿವಕುಮಾರ್ ಬೆಳಗಾವಿ ಹೊರವಲಯದಲ್ಲಿರುವ ತಮ್ಮ ಆಪ್ತ ಹಾಗೂ ಗಣಿ ಉದ್ಯಮಿ ದೊಡ್ಡಣ್ಣನವರ್ ಫಾರಂ ಹೌಸ್‌ನಲ್ಲಿ ತಮ್ಮ ಬೆಂಬಲಿಗರಿಗೆ ಔತಣಕೂಟ ಏರ್ಪಡಿಸಿದ್ದರು.
ಔತಣಕೂಟದಲ್ಲಿ 57 ಮಂದಿ
ಸಚಿವರು, ಉಭಯ ಸದನಗಳ ಸದಸ್ಯರೂ ಸೇರಿದಂತೆ 57 ಮಂದಿ ಈ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಬೋಜನಕೂಟಕ್ಕೂ ಮುನ್ನ ನಡೆದ ಸಭೆಯಲ್ಲಿ ಶಿವಕುಮಾರ್ ಮಾತನಾಡಿ, ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ವರಿಷ್ಠರ ಅಭಯ ನನ್ನ ಮೇಲಿದೆ.
ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ, ಅಷ್ಟೇ ಅಲ್ಲದೆ, ಬೇರೆ ಮುಖಂಡರೂ ನನ್ನ ಬೆನ್ನಿಗಿದ್ದಾರೆ.
ದುಡುಕ ಬೇಡಿ, ತಾಳ್ಮೆಯಿಂದಿರಿ
ನೀವು ಆತಂಕಪಡುವ ಅಗತ್ಯವಿಲ್ಲ, ದುಡುಕುವುದೂ ಬೇಡ, ತಾಳ್ಮೆಯಿಂದಿರಿ, ಎಲ್ಲವೂ ಯಾವ ಸಮಯಕ್ಕೆ ಆಗಬೇಕೋ, ಆ ಸಮಯಕ್ಕೆ ಆಗುತ್ತೆ.
ನನ್ನನ್ನು ಮತ್ತು ಮುಖ್ಯಮಂತ್ರಿ ಅವರನ್ನು ಡಿಸೆಂಬರ್ 21ರಂದು ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದಾರೆ, ಸೋನಿಯಾ ಗಾಂಧಿ ಒಂದೆರಡು ದಿನಗಳ ಹಿಂದೆ ನನ್ನ ಬಳಿ ಮಾತನಾಡಿದರು.
ಸೋನಿಯಾ ಗಾಂಧಿ ಹಾಗೂ ಖರ್ಗೆ ನನ್ನ ಬಳಿ ಮಾತನಾಡಿರುವ ವಿವರವನ್ನು ಬಹಿರಂಗಪಡಿಸಲಾಗದು, ಯತೀಂದ್ರ ಸೇರಿದಂತೆ ಯಾರೇ ಹೇಳಿಕೆಗಳನ್ನು ನೀಡಿದರೆ ಅದಕ್ಕೆ ನೀವುಗಳು ಉದ್ವೇಗ ಮತ್ತು ಆವೇಶಕ್ಕೆ ಒಳಗಾಗಿ ಪ್ರತಿಕ್ರಿಯೆ ನೀಡಬೇಡಿ ಎಂದು ತಿಳಿಸಿದ್ದಾರೆ.
ಖರ್ಗೆ ಮಾರ್ಗದರ್ಶನ
ನನಗೆ ಖರ್ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ, ಅವರ ಸಲಹೆ ಇಟ್ಟುಕೊಂಡೇ ಮುಂದುವರೆದಿದ್ದೇನೆ.
ಈ ತಿಂಗಳ 14ರಂದು ದೆಹಲಿಯಲ್ಲಿ ಮತಗಳ್ಳತನ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲು ಎಲ್ಲರೂ ಬನ್ನಿ, ಅವಕಾಶ ಸಿಕ್ಕರೆ ರಾಹುಲ್ ಗಾಂಧಿ ಜೊತೆ ಮಾತನಾಡೋಣ, ಇಲ್ಲದಿದ್ದರೆ, 21ಕ್ಕೆ ಹೇಗಿದ್ದರೂ ಸಭೆ ನಿಗದಿಯಾಗಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಇರುವವರೆಗೂ ಪ್ರತೀರಾತ್ರಿ ನಾವು ಬೋಜನಕೂಟಕ್ಕೆ ಸೇರೋಣ, ನಿಮ್ಮ ಜೊತೆ ಇನ್ನಷ್ಟು ಸ್ನೇಹಿತರು ಸೇರಿಕೊಳ್ಳುತ್ತಾರೆ, ಅವರಿಗೆ ಇಂದು ಬರಲು ಸಾಧ್ಯವಾಗಿಲ್ಲ ಎಂದು ಶಿವಕುಮಾರ್ ತಿಳಿಸಿದ್ದಾರೆ.


