ಬೆಳಗಾವಿ,ಸುವರ್ಣವಿಧಾನಸೌಧ:’ನಾನು ಹೋದರೆ, ಹೋದೇನು’ ಎಂಬ ಕನಕದಾಸರ ನುಡಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ನೆನಪಿಸಿ, ನಮ್ಮ ಸರ್ಕಾರ ಸದೃಢವಾಗಿರುತ್ತದೆ ಎಂದಿದ್ದಾರೆ.
ಅಧಿಕಾರ ಹಂಚಿಕೆ ಕುರಿತಂತೆ ಪ್ರತಿಪಕ್ಷದವರು ಎತ್ತಿದ ಪ್ರಸ್ತಾವಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಇದು ನನ್ನ ಸರ್ಕಾರವಲ್ಲ, ನಮ್ಮ ಸರ್ಕಾರ, ಈಗಲೂ ನಾನೇ ಮುಖ್ಯಮಂತ್ರಿ, ವರಿಷ್ಠರು ಹೇಳುವತನಕವೂ ನಾನೇ ಮುಖ್ಯಮಂತ್ರಿ ಎಂದು ಒತ್ತಿ ಒತ್ತಿ ಹೇಳಿ, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರನ್ನು ಮೂದಲಿಸಿದರು.
ಷೇರು ಧನ ತಾರತಮ್ಯ
ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಷೇರು ಧನ ಕೊಡುವ ವಿಚಾರದಲ್ಲಿ ತಾರತಮ್ಯ ಆಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಬಂಧಿ ಹಾಗೂ ಅವರ ಬಣದ ರಂಗನಾಥ್ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ, ರಂಗನಾಥ್ ನಮ್ಮ ಮೇಲೆ ವಿಶ್ವಾಸವಿಡಿ, ತಾರತಮ್ಯ ಆಗಿದ್ದರೆ ಪರಿಹರಿಸುತ್ತೇವೆ ಎಂದು ಹೇಳುತ್ತಿದ್ದಂತೆಯೇ, ಪ್ರತಿಪಕ್ಷ ನಾಯಕ ಆರ್.ಅಶೋಕ್, ತಾರತಮ್ಯ ಬೇಕೆಂತಲೇ ಮಾಡಿದ್ದೀರಿ ಎಂದು ದೂರಿದರು.
ನೀವು ಊರಿಯುತ್ತಿರುವ ಬೆಂಕಿಗೆ ತುಪ್ಪ ಹಾಕಬೇಡಿ ಎಂದು ಸಿದ್ದರಾಮಯ್ಯ ಮಾತು ಮುಗಿಸುತ್ತಿದ್ದಂತೆ, ಹಾಗಾದರೆ, ನಿಮ್ಮಲ್ಲಿ ಬೆಂಕಿ ಊರಿಯುತ್ತಿದೆಯೇ ಎಂದು ಅಶೋಕ್ ಕೆಣಕಿದರು.
ವರಿಷ್ಠರ ನಿರ್ಧಾರವೇ ಅಂತಿಮ
ಈ ಸಂದರ್ಭದಲ್ಲಿ ಕನಕದಾಸರ ನುಡಿಯನ್ನು ನೆನಪಿಸಿ, ಇದು ನನ್ನ ಸರ್ಕಾರವಲ್ಲ, ನಮ್ಮ ಸರ್ಕಾರ, ಕಾಂಗ್ರೆಸ್‌ನಲ್ಲಿ ವರಿಷ್ಠರ ನಿರ್ಧಾರವೇ ಅಂತಿಮ, ಆದರೆ, ಬಿಜೆಪಿ ಅಧ್ಯಕ್ಷಗಿರಿ ಆಯ್ಕೆಯಲ್ಲಿ ಒಮ್ಮತವಿಲ್ಲ, ಅವರಿಗೆ ಅಸೂಯೆ ಕಾಡುತ್ತಿದೆ.
ನಮ್ಮ ಸರ್ಕಾರ ಜನರಿಗೆ ಐದು ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ ಹಾಗೂ 2028ರ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ.
2013 ಹಾಗೂ 2023ರಲ್ಲಿಯೂ ಕಾಂಗ್ರೆಸ್‌ಗೆ ಜನ ಆಶೀರ್ವಾದ ಮಾಡಿದ್ದಾರೆ, ಆದರೆ, ಬಿಜೆಪಿಗೆ ಒಮ್ಮೆಯೂ ಜನಾದೇಶ ದೊರೆತಿಲ್ಲ, ಭವಿಷ್ಯದಲ್ಲೂ ದೊರೆಯುವುದಿಲ್ಲ, ನೀವು ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರುತ್ತೀರಿ.
ಉರಿಯುವುದರ ಮೇಲೆ ಉಪ್ಪು ಹಾಕಬಾರದು
ಉರಿಯುವುದರ ಮೇಲೆ ಉಪ್ಪು ಹಾಕಬಾರದು ಎಂಬ ಗಾದೆ ಮಾತಿದೆ, ಆದರೆ, ವಿರೋಧ ಪಕ್ಷದವರು ಇರುವುದೇ ಉರಿಯುವುದರ ಮೇಲೆ ಉಪ್ಪು ಸುರಿಯಲು ಎಂದರು.
ವಿರೋಧಪಕ್ಷ ಏನೇ ಪ್ರಚೋದನೆ ಮಾಡಿದರೂ, ನಮ್ಮ ಶಾಸಕರು ಯಾರೂ ಪ್ರಚೋದಿತರಾಗುವುದಿಲ್ಲ, ಐದು ವರ್ಷ ನಾನೇ ಮುಖ್ಯಮಂತ್ರಿ ಆಗಿರಬೇಕೆಂದು ಜನರು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ, 140 ಶಾಸಕರು ನಮ್ಮೊಂದಿಗಿದ್ದಾರೆ, ವಿರೋಧಪಕ್ಷ ಹುಳಿ ಹಿಂಡುವ ಅಗತ್ಯವಿಲ್ಲ.
ಜನರ ನಾಡಿ ಮಿಡಿತ ತಿಳಿದಿದೆ
ಜನರ ನಾಡಿ ಮಿಡಿತ ಸರ್ಕಾರಕ್ಕೆ ತಿಳಿದಿದೆ, ಕರ್ನಾಟಕದ ಜನತೆ ಬಿಜೆಪಿಯನ್ನು ಎಂದಿಗೂ ಅಧಿಕಾರಕ್ಕೆ ತರುವುದಿಲ್ಲ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಎರಡು ಬಾರಿ ಅಧಿಕಾರ ನಡೆಸಿದರೂ, ಒಂದು ಬಾರಿಯೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ.
2008, 2018ರಲ್ಲಿ ಆಪರೇಷನ್ ಕಮಲ ಮಾಡಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ, ರಾಜ್ಯದ ಜನ ಅವರಿಗೆ ಆಶೀರ್ವಾದ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ, 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬ ಉದ್ದೇಶದಿಂದ ಜೆಡಿಎಸ್‌ನೊಂದಿಗೆ ಸರ್ಕಾರ ರಚಿಸಲಾಯಿತು, ಆದರೆ, ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಉದ್ದೇಶದ ಬಗ್ಗೆ ಪ್ರಶ್ನಿಸಿದರು.

