ಬೆಳಗಾವಿ:ಅಧಿಕಾರ ಹಂಚಿಕೆ ಒಪ್ಪಂದವೇ ಆಗಿಲ್ಲ, ನಾನೇ ಐದು ವರ್ಷ ಆಡಳಿತ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲೇ ಇಂದು ಘೋಷಿಸಿದ್ದಾರೆ.
ಪಕ್ಷದ ಶಾಸಕರು ನನ್ನನ್ನು ಆಯ್ಕೆ ಮಾಡಿ ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ, ಶಾಸಕರು, ವರಿಷ್ಠರು ನನ್ನ ಜೊತೆ ಇರುವವರೆಗೂ ನಾನೇ ಮುಖ್ಯಮಂತ್ರಿ.
ಪಕ್ಷದವರಿಗೆ ಸಂದೇಶ
ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಕೆಲವು ಬಿಜೆಪಿ ಶಾಸಕರು, ಅಧಿಕಾರ ಹಸ್ತಾಂತರ ವಿಷಯ ಪ್ರಸ್ತಾಪಿಸಿದ್ದನ್ನೇ ಆಧಾರ ಮಾಡಿಕೊಂಡ ಮುಖ್ಯಮಂತ್ರಿ, ವಿರೋಧ ಪಕ್ಷಗಳಿಗಷ್ಟೇ ಅಲ್ಲದೆ, ತಮ್ಮ ಪಕ್ಷದವರಿಗೂ ಸಂದೇಶ ನೀಡಿದರು.
ಕಳೆದ ನಾಲ್ಕು ದಿನಗಳಿಂದ ಬಳಲಿದ್ದೀರಿ, ನಾನು, ರಾಜಕೀಯ ನಿಶ್ಯಕ್ತಿ ಎಂದುಕೊಂಡಿದ್ದೆ, ನಿಮಗೆ ರಾಜಕೀಯ ಶಕ್ತಿ ಬಂದಿದೆಯೇ ಎಂಬುದಾಗಿ ಅಶೋಕ್ ಕಾಲೆಳೆದಿದ್ದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಮುಖ್ಯಮಂತ್ರಿ, ಪಕ್ಷದಲ್ಲಿನ ತಮ್ಮ ವಿರೋಧಿಗಳಿಗೆ ಅಧಿಕಾರ ಹಂಚಿಕೆ ಸೂತ್ರವೇ ಇಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಲ್ಲದೆ, ನನಗೆ ರಾಜಕೀಯ ನಿಶ್ಯಕ್ತಿಯೇ ಇಲ್ಲ, ಅಂತಹ ಅವಕಾಶ ಸೃಷ್ಟಿಯೂ ಆಗುವುದಿಲ್ಲ ಎಂದರು.
ಅಷ್ಟೊಂದು ತಲೆಕೆಡಿಸಿಕೊಂಡು ರಾಜಕೀಯ ಮಾಡುವ ಅಗತ್ಯವೂ ಇಲ್ಲ, ನನಗೆ ರಾಜಕೀಯ ನಿಶ್ಯಕ್ತಿ ಎಂಬುದು ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಬರುವುದಿಲ್ಲ, ಆದರೆ ದೈಹಿಕ ನಿಶ್ಯಕ್ತಿ ಇರಬಹುದು ಎಂದರು.
ವರಿಷ್ಠರು ಸೂತ್ರ ಮಾಡಿಲ್ಲ
ನಮ್ಮಲ್ಲಿ ಅಧಿಕಾರ ಹಂಚಿಕೆ ಸೂತ್ರ ವರಿಷ್ಠರು ಮಾಡಿಲ್ಲ, ಅಂತಹ ತೀರ್ಮಾನವೂ ಆಗಿಲ್ಲ, ಈಗ ನಾನೇ ಮುಖ್ಯಮಂತ್ರಿ, ಮುಂದೆಯೂ ನಾನೇ ಮುಖ್ಯಮಂತ್ರಿ, ನನ್ನ ಪ್ರಕಾರ ವರಿಷ್ಠರು ನನ್ನ ಬೆನ್ನ ಹಿಂದಿದ್ದಾರೆ.
ಜನರ ಆಶೀರ್ವಾದದ ಜೊತೆಗೆ ವರಿಷ್ಠರ ಬೆಂಬಲ ಇರುವವರೆಗೂ ನನ್ನನ್ನು ಅಧಿಕಾರದಿಂದ ಇಳಿಸಲು ಸಾಧ್ಯವಿಲ್ಲ.
ನನಗೆ ಯಾರೂ ನಿರ್ದೇಶನ ನೀಡುವವರಿಲ್ಲ, ನಾನೇ ಎಲ್ಲಾ ಸೂತ್ರದಾರ ಎನ್ನುವ ಮೂಲಕ ಅಧಿಕಾರ ಹಂಚಿಕೆ ಗೊಂದಲಕ್ಕೆ ಸಿದ್ದರಾಮಯ್ಯ ತೆರೆ ಎಳೆದರು.
ಆಪ್ತರ ಜೊತೆ ಚರ್ಚೆ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ಏರ್ಪಡಿಸಿದ್ದ ಭೋಜನಕೂಟದಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆಯೇ ಆಪ್ತ ಸಚಿವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದರು.
ಇಂದು ಅಧಿವೇಶನ ಕಲಾಪ ವೇಳೆಯೇ ಅಧಿಕಾರ ಹಂಚಿಕೆ ಗೊಂದಲಕ್ಕೆ ಸ್ಪಷ್ಟನೆ ನೀಡಿದರು.

