ಬೆಂಗಳೂರು:ಅಧಿಕಾರ ಹಸ್ತಾಂತರ ಕುರಿತು ಚರ್ಚೆ ನಡೆಸಲು ದೆಹಲಿ ವರಿಷ್ಠರ ಕರೆಗೆ ನಾನು ಮತ್ತು ಮುಖ್ಯಮಂತ್ರಿ ಸಿದ್ದಾರಾಮಯ್ಯ ಕಾಯುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಬಹಿರಂಗ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರು ನಮ್ಮಿಬ್ಬರನ್ನೂ ಸಂಪರ್ಕಿಸಿ, ನಾವು ಕರೆದಾಗ ದೆಹಲಿಗೆ ಬನ್ನಿ ಎಂಬ ಆದೇಶ ನೀಡಿದ್ದಾರೆ, ಅವರ ಕರೆಗಾಗಿ ಕಾಯುತ್ತಿದ್ದೇವೆ.
ಸೂಕ್ತ ಸಮಯದಲ್ಲಿ ಕರೆಸಲಿದ್ದಾರೆ
ನಮ್ಮ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಮತ್ತು ನನಗೆ, ಇಬ್ಬರಿಗೂ ಏನೋ ಹೇಳಿದ್ದಾರೆ, ಸೂಕ್ತ ಸಮಯದಲ್ಲಿ ಕರೆಸುತ್ತೇವೆ ಎಂದಿದ್ದಾರೆ, ಆಗ ಇಬ್ಬರೂ ದೆಹಲಿಗೆ ಹೋಗುತ್ತೇವೆ ಎಂದರು.
ಹೈಕಮಾಂಡ್ ನಾಯಕರ ಭೇಟಿ ಮಾಡುವ ವಿಷಯ ಕೇಳಿಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ಆ ರೀತಿ ಇದ್ದರೆ ನಿಮಗೂ ತಿಳಿಸುತ್ತೇವೆ, ನಿಮಗೆ ತಿಳಿಸದೇ ಏನೂ ಮಾಡುವುದಿಲ್ಲ, ನಾನು ಕದ್ದುಮುಚ್ಚಿ ಹೋಗುವುದಿಲ್ಲ ಎಂದರು.
ನಾಗಸಾಧುಗಳು ಮನೆಗೆ ಬಂದು ಆಶೀರ್ವಾದ ಮಾಡಿದ್ದಾರೆ, ಮನೆಗೆ ಬಂದವರನ್ನು ಬೇಡ ಎನ್ನಲು ಆಗುವುದಿಲ್ಲ, ರಾಜಕೀಯದಲ್ಲಿರುವ ನಮಗೆ ಸಾಧು ಸಂತರು, ಸ್ವಾಮೀಜಿಗಳು, ಹಿರಿಯರು ಸೇರಿದಂತೆ ಎಲ್ಲಾ ಜನರೂ ಬೇಕು.
ಧಾರ್ಮಿಕ ಕೇಂದ್ರಗಳಿಗೂ ನೆರವು
ನಮ್ಮ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ನಡೆಸುತ್ತಿದೆ, ವಕ್ಫ್, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಸಹಾಯ ಮಾಡಲಾಗುತ್ತಿದೆ ಎಂದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಹಾಕಿದ್ದ ಚಾರ್ಜ್‌ಶೀಟ್ ಕೋರ್ಟ್‌ನಲ್ಲಿ ತಿರಸ್ಕೃತಗೊಂಡಿದ್ದು, ಈಗ ಒಂದು ಎಫ್‌ಐಆರ್ ಬಾಕಿ ಉಳಿದಿದೆ, ನಮ್ಮ ಮೇಲೆ ಯಾವ ರೀತಿ ದಬ್ಬಾಳಿಕೆ ನಡೆಯುತ್ತಿದೆ ಎಂಬುದನ್ನು ತಿಳಿಸಲು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ.
ನನಗೆ ನೋಟಿಸ್ ನೀಡಿರುವ ಸಂಬಂಧ ಮಂಗಳವಾರ ದೆಹಲಿಗೆ ಹೋದಾಗ ಪೊಲೀಸರನ್ನು ಭೇಟಿ ಮಾಡುವೆ.
ಕೇಂದ್ರ ಜಲಶಕ್ತಿ ಸಚಿವರ ಸಭೆ
ಕೇಂದ್ರ ಜಲಶಕ್ತಿ ಸಚಿವರು ನದಿ ಜೋಡಣೆ ವಿಚಾರ ಮಂಗಳವಾರ ಸಭೆ ಕರೆದಿದ್ದು, ನಮ್ಮ ರಾಜ್ಯದ ಪ್ರಮುಖ ಯೋಜನೆಗಳಾದ ಮಹದಾಯಿ, ಕೃಷ್ಣ ಮೇಲ್ದಂಡೆ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ವಿಚಾರ ಚರ್ಚೆ ಮಾಡುವೆ.
ಇದೇ ವೇಳೆ ಕೇಂದ್ರ ಅರಣ್ಯ, ನಗರಾಭಿವೃದ್ಧಿ ಸಚಿವರನ್ನೂ ಭೇಟಿ ಮಾಡಲು ಸಮಯ ಕೇಳಿರುವೆ, ರಾಜ್ಯದ ಹಿತಾಸಕ್ತಿ ವಿಚಾರವಾಗಿ ನಾನು ಅವರನ್ನು ಭೇಟಿ ಮಾಡಲು ತೀರ್ಮಾನಿಸಿರುವೆ, ರಾಜ್ಯದ ಸಂಸದರ ಜೊತೆಗೆ ಭೇಟಿಯಾಗುವ ಆಲೋಚನೆ ಇತ್ತು, ಇವೆಲ್ಲ ಆದ ನಂತರ ಅವರು ಬಂದರೆ ಪ್ರಧಾನಮಂತ್ರಿಯನ್ನೂ ಭೇಟಿ ಮಾಡುವೆ ಎಂದರು.
ವರಿಷ್ಠರ ಆದೇಶದ ಮೇರೆಗೆ ಸಿದ್ದರಾಮಯ್ಯ ಮತ್ತು ನಾನು, ಉಪಹಾರ ಮತ್ತು ಭೋಜನಕೂಟ ಸಂದರ್ಭದಲ್ಲಿ ಇಬ್ಬರೂ ಏನು ಚರ್ಚೆ ಮಾಡಿದ್ದೇವೆ ಎಂಬುದು ನಮ್ಮಿಬ್ಬರಿಗೆ ಗೊತ್ತಿದೆ.
ಕದ್ದು ಮುಚ್ಚಿ ಹೋಗುವುದಿಲ್ಲ
ಡಿಸೆಂಬರ್ 24 ಇಲ್ಲವೇ 27ರಂದು ನಿಮ್ಮಿಬ್ಬರನ್ನು ದೆಹಲಿಗೆ ಬರಲು ಸೂಚಿಸಿದ್ದಾರಾ ಎಂಬ ಪ್ರಶ್ನೆಗೆ ನಾನೇನು ಕದ್ದು ಮುಚ್ಚಿ ಹೋಗುವುದಿಲ್ಲ, ವರಿಷ್ಠರ ಆಹ್ವಾನಕ್ಕೆ ಕಾಯುತ್ತಿದ್ದೇವೆ.
ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಕೇಂದ್ರ ಸಚಿವರು ಡಿಸೆಂಬರ್ 23ರಂದು ಸಭೆ ಕರೆದಿದ್ದು ದೆಹಲಿಗೆ ತೆರಳುತ್ತಿರುವೆ ಎಂದರು.
ಜರ್ಮನಿ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಡಿಸೆಂಬರ್ 23ರಂದು ದೆಹಲಿಗೆ ಹಿಂತಿರುಗಲಿದ್ದಾರೆ.
ಮತ್ತೆ ವಿದೇಶ ಪ್ರವಾಸ
ಡಿಸೆಂಬರ್ 24ರಂದು ಒಂದು ದಿನ ಮಾತ್ರ ದೆಹಲಿಯಲ್ಲಿ ಉಳಿದು ಮತ್ತೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ರಾಹುಲ್ ಜನವರಿ 3ಕ್ಕೆ ಹಿಂತಿರುಗಿ 14ರವರೆಗೆ ದೆಹಲಿಯಲ್ಲೇ ಇರಲಿದ್ದಾರೆ, ಆ ನಂತರ ಮತ್ತೆ ವಿದೇಶ ಪ್ರವಾಸ ನಿಗದಿಯಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿನ ಗೊಂದಲವನ್ನು ಡಿಸೆಂಬರ್ 24 ಇಲ್ಲವೇ ಜನವರಿ ಮೊದಲ ವಾರದಲ್ಲಿ ಬಗೆಹರಿಸಬೇಕಿದೆ.
ಸಿದ್ದರಾಮಯ್ಯ ವಿಧಾನಮಂಡಲದ ಅಧಿವೇಶನ ಮುಗಿದ ನಂತರವೂ ಬೆಳಗಾವಿಯ ಸರ್ಕೀಟ್ ಹೌಸ್‌ನಲ್ಲಿ ತಮ್ಮ ಆಪ್ತರೊಂದಿಗೆ ಎರಡು-ಮೂರು ಸುತ್ತಿನ ಚರ್ಚೆ ನಡೆಸಿ ಶನಿವಾರ ಸಂಜೆ ನಗರಕ್ಕೆ ಹಿಂತಿರುಗಿದ್ದಾರೆ.
ಶಿವಕುಮಾರ್ ಶುಕ್ರವಾರ ಬೆಳಗಾವಿ ಅಧಿವೇಶನ ಕಲಾಪದಲ್ಲಿ ಪಾಲ್ಗೊಳ್ಳದೆ, ದೇವಾಲಯಗಳಿಗೆ ತೆರಳಿದ್ದರು.

