ಬಳ್ಳಾರಿ:ಶಾಸಕ ಜನಾರ್ದನ ರೆಡ್ಡಿ ನಿವಾಸದ ಬಳಿ ನಡೆದ ಹಿಂಸಾಚಾರ ಬೆನ್ನಲ್ಲೇ ಅಮಾನತುಗೊಂಡಿದ್ದ ಬಳ್ಳಾರಿ ಪೋಲಿಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅಮಾನತು ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪವನ್, ತುಮಕೂರಿನ ಹಿರಿಯೂರು ಸಮೀಪದ ಬರಗೂರಿನಲ್ಲಿನ ತಮ್ಮ ಸ್ನೇಹಿತನ ತೋಟದ ಮನೆಯಲ್ಲಿ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಪ್ರಾಣಾಪಾಯದಿಂದ ಪಾರು
ಅವರ ಆರೋಗ್ಯದಲ್ಲಿ ಏರುಪೇರು ಕಂಡ ತಕ್ಷಣ ಸ್ನೇಹಿತರು ಮತ್ತು ಕುಟುಂಬಸ್ಥರು, ತುಮಕೂರು ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್‌ಪಿ ಅವರನ್ನು ಹಿರಿಯ ಪೋಲಿಸ್ ಅಧಿಕಾರಿಗಳ ತಂಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿತು.
ಹನ್ನೊಂದು ವರ್ಷಗಳ ನಂತರ ಕಾರ್ಯನಿರ್ವಾಹಕ ಹುದ್ದೆಗೆ ಮರಳಿದ್ದ ಅವರ ಕರ್ತವ್ಯದ ಮೊದಲ ದಿನವೇ ಬಳ್ಳಾರಿ ನಗರದಲ್ಲಿ ರಾಜಕೀಯ ಗಲಭೆಯಿಂದ ಒಬ್ಬ ವ್ಯಕ್ತಿ ಮೃತಪಟ್ಟು ಹಲವರಿಗೆ ಗಾಯಗಳಾದ ಘಟನೆ ನಡೆದಿತ್ತು.
ಗಲಭೆ ವೇಳೆ ಕರ್ತವ್ಯದಲ್ಲಿರಲಿಲ್ಲ
ಗಲಭೆ ವೇಳೆ ಎಸ್‌ಪಿ ಸ್ಥಳದಲ್ಲಿ ಕರ್ತವ್ಯದ ಮೇಲಿರಲಿಲ್ಲ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳ ಕರೆಯನ್ನೂ ಸ್ವೀಕರಿಸದೆ ಔತಣಕೂಟವೊಂದರಲ್ಲಿ ಪಾಲ್ಗೊಂಡಿದ್ದರೆಂಬ ವರದಿ ಆಧಾರದ ಮೇಲೆ ಶುಕ್ರವಾರ ರಾತ್ರಿಯೇ ಸೇವೆಯಿಂದ ಅಮಾತು ಮಾಡಲಾಯಿತು.
ಇದರ ಮಧ್ಯೆ ಪವನ್ ನೆಜ್ಜೂರ್ ಆತ್ಮಹತ್ಯೆಗೆ ಯತ್ನಿಸಿಲ್ಲ, ವಿಶ್ರಾಂತಿಯಲ್ಲಿ ಇದ್ದರು ಎಂದು ಇಲಾಖೆ ಸ್ಪಷ್ಟನೆ ನೀಡಿದೆ.
ಅವರಿಗೆ ಆರೋಗ್ಯದಲ್ಲಿ ಏರುಪೇರು ಆದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆಯೇ ಹೊರತು ಆತ್ಮಹತ್ಯೆ ಯತ್ನ ಪ್ರಕರಣದಿಂದ ಅಲ್ಲ ಎಂದಿದೆ.
ಔತಣದಲ್ಲಿ ಭಾಗಿ ಆರೋಪ
ಜನವರಿ 1ರಂದು ಬಳ್ಳಾರಿ ಎಸ್‌ಪಿ ಆಗಿ ಶೋಭಾ ರಾಣಿ ಅವರಿಂದ ನೆಜ್ಜೂರ್ ಅಧಿಕಾರ ಸ್ವೀಕರಿಸಿದ್ದರು, ಈ ವೇಳೆ ಶೋಭಾ ರಾಣಿ ತಮ್ಮ ಸಿಬ್ಬಂದಿಗೆ ಏರ್ಪಡಿಸಿದ್ದ ಔತಣದಲ್ಲಿ ಇವರೂ ಭಾಗಿಯಾಗಿದ್ದರು.
ಔತಣಕೂಟ ನಡೆಯುತ್ತಿದ್ದ ವೇಳೆಯಲ್ಲೇ ಬಳ್ಳಾರಿಯಲ್ಲಿ ರಾಜಕೀಯ ವೈಷಮ್ಯ ಉಂಟಾಗಿ, ಜನಾರ್ದನ ರೆಡ್ಡಿ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದ್ದಲ್ಲದೆ, ಸ್ಥಳೀಯ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು.
ಕಾಂಗ್ರೆಸ್ ಕಾರ್ಯಕರ್ತ ಸಾವು
ಈ ಸಂದರ್ಭದಲ್ಲಿ ಹಾರಿಸಿದ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದ, ಘರ್ಷಣೆ ನಿಯಂತ್ರಿಸಲು ಗೃಹ ಸಚಿವರು ಮತ್ತು ಪೋಲಿಸ್ ಮಹಾನಿರ್ದೇಶಕರು ಸೂಚಿಸಿದ್ದರು.
ಆಗತಾನೇ ಅಧಿಕಾರ ವಹಿಸಿಕೊಂಡಿದ್ದ ಎಸ್‌ಪಿ ಹಿರಿಯ ಪೋಲಿಸ್ ಅಧಿಕಾರಿಗಳ ಸಂಪರ್ಕದಲ್ಲಿ ಇರಲಿಲ್ಲ, ಇದರಿಂದ ಅಸಮಾಧಾನಗೊಂಡ ಪೋಲಿಸ್ ಮಹಾನಿರ್ದೇಶಕರು, ಬಳ್ಳಾರಿ ಗಲಭೆ ನಿಯಂತ್ರಣಕ್ಕೆ ಚಿತ್ರದುರ್ಗ ಎಸ್‌ಪಿ ಅವರನ್ನು ನಿಯೋಜಿಸಿದ್ದರು.

