ಬೆಂಗಳೂರು:ಕರ್ನಾಟಕದಲ್ಲಿ ದೀರ್ಘ ಕಾಲ ಆಡಳಿತ ನಡೆಸಿದ್ದೇನೆ ಎಂಬುದಾಗಿ ಕೊಚ್ಚಿಕೊಳ್ಳುತ್ತಿರುವ ಸಿದ್ದರಾಮಯ್ಯ ಆಡಳಿತ ವೈಖರಿ ಗಮನಿಸಿದರೆ ದಾಖಲೆಗೆ ಮಣ್ಣು ಹೊಯ್ದುಕೊಳ್ಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ದೇವರಾಜ ಅರಸ್ ದಾಖಲೆ ಮುರಿಯುವ ಕಾಂಗ್ರೆಸ್‌ನ ಕೊನೆ ಮುಖ್ಯಮಂತ್ರಿ ಇವರಾಗಲಿದ್ದಾರೆ, ಆ ಪಕ್ಷಕ್ಕೆ ರಾಜ್ಯದಲ್ಲಿ ಇದು ಕೊನೆ ಆಡಳಿತ.
ಮತದಾರರು ಬುದ್ಧಿ ಕಲಿಸುತ್ತಾರೆ
ಮುಂದಿನ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂಬುದಾಗಿ ಹೇಳಿಕೊಳ್ಳುವ ಇವರಿಗೆ ಮತದಾರರು ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ.
ಕಳೆದ ಎರಡೂವರೆ ವರ್ಷಗಳ ಆಡಳಿತ ಇತಿಹಾಸ ಸೇರುವಂತಹ ಕೆಟ್ಟ ಆಡಳಿತವಾಗಿದೆ, ಭ್ರಷ್ಟಾಚಾರ, ಕೊಲೆ, ಸುಲಿಗೆ, ಡ್ರಗ್ಸ್ ಮಾಫಿಯಾ, ಮಾರ್ಯಾದಾ ಹತ್ಯೆ ಪ್ರಕರಣಗಳು ನಿರಂತರವಾಗಿವೆ.
ಇದನ್ನು ಹತ್ತಿಕ್ಕಲು ಸಾಧ್ಯವಾಗದೆ, ದಾಖಲೆಗೋಸ್ಕರ ಸಿದ್ದರಾಮಯ್ಯ ಆಡಳಿತ ನಡೆಸುತ್ತಿರುವಂತಿದೆ.
ಅಧಿಕಾರಿಗಳು ಗುಲಾಮರಾಗಿದ್ದಾರೆ
ಅಧಿಕಾರಿಗಳು ಇವರ ಆಡಳಿತದಲ್ಲಿ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ, ಸ್ವಾತಂತ್ರ್ಯ ಎಂಬುದೇ ಇಲ್ಲ, ಬ್ಯಾಟರಿ ಹಾಕಿ ಹುಡುಕಿದರೂ ಒಬ್ಬ ಒಳ್ಳೆ ಅಧಿಕಾರಿ ಸಿಗುವುದಿಲ್ಲ ಎಂದು ಟೀಕಿಸಿದರು.
ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮನೆ ಮುಂದೆ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ತುರ್ತು ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು, ಘಟನಾ ಸ್ಥಳದಲ್ಲಿದ್ದ ಐಜಿ, ಹೆಚ್ಚುವರಿ ಎಸ್‌ಪಿ ಹಾಗೂ ಡಿವೈಎಸ್‌ಪಿ ಅವರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ನಕಲಿ ಶ್ಯಾಮರಂತೆ ವರ್ತಿಸುತ್ತಿದ್ದಾರೆ, ಗೃಹ ಸಚಿವರಿಗೆ ಅಧಿಕಾರದ ಗತ್ತು ಎಂಬುದೇ ಗೊತ್ತಿಲ್ಲ, ಯಾವುದೇ ಪ್ರಕರಣ ನಡೆದರೂ ಎಸ್‌ಐಟಿ ರಚಿಸಿ ಕೈತೊಳೆದುಕೊಳ್ಳುವುದು, ನಾಜೂಕಯ್ಯನ ರೀತಿ ಮಾತನಾಡುವುದೊಂದೇ ತಿಳಿದಿರುವುದು.
ಬಳ್ಳಾರಿ ಘಟನೆ ಮುಚ್ಚಿಹಾಕುವ ಯತ್ನ
ಬಳ್ಳಾರಿ ಘಟನೆ ಮುಚ್ಚಿಹಾಕುವ ಯತ್ನಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವರ ಹೇಳಿಕೆಗಳೇ ಸಾಕ್ಷಿಯಾಗಿವೆ.
ಬಹಿರಂಗವಾಗಿ ಅಧಿಕಾರದ ಮುಖ್ಯಸ್ಥಾನದಲ್ಲಿ ಇರುವವರೇ ಇಂತಹ ಹೇಳಿಕೆಗಳನ್ನು ನೀಡಿದರೆ, ಇನ್ನು ತನಿಖೆಯ ಸ್ವರೂಪ ಹೇಗಿರುತ್ತದೆ ಎಂದು ಪ್ರಶ್ನಿಸಿದರು.
ಸ್ಥಳೀಯ ಶಾಸಕ ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿ ಅವರ ಖಾಸಗಿ ಭದ್ರತಾ ಸಿಬ್ಬಂದಿ ಹಾರಿಸಿದ ಗುಂಡಿನಿಂದ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದಾನೆ.
ಕದ್ದುಮುಚ್ಚಿ ಹಣ ಕೊಟ್ಟಿದ್ದಾರೆ
ಕೊಲೆ ಮುಚ್ಚಿಹಾಕಲು ಆತನ ಕುಟುಂಬಕ್ಕೆ ೨೫ ಲಕ್ಷ ರೂ.ಗಳನ್ನು ಮೂಟೆಯಲ್ಲಿ ಕದ್ದುಮುಚ್ಚಿ ಕೊಟ್ಟಿದ್ದಾರೆ, ಇದು ಯಾರ ಹಣ, ಆದಾಯ ತೆರಿಗೆ ವ್ಯಾಪ್ತಿಗೆ ಬಂದಿದೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ಭದ್ರತೆ ಇಲ್ಲವಾಗಿದೆ, ಅವರು ಈ ಸರ್ಕಾರವನ್ನು ಧಿಕ್ಕರಿಸಿ ಹೊರಬರಬೇಕು ಎಂದು ಮನವಿ ಮಾಡಿದರು.
ತಮ್ಮ ಅಧಿಕಾರದ ಆಸೆ ಮತ್ತು ತೆವಲಿಗೆ ಯಾರನ್ನು ಬೇಕಾದರೂ ಬಲಿ ಕೊಡುತ್ತಾರೆ, ಪಕ್ಷದ ಕಾರ್ಯಕರ್ತನ ಕೊಲೆಯನ್ನು ಮುಚ್ಚಿಹಾಕಲು ಸರ್ಕಾರವೇ ಮುಂದಾಗಿದ್ದು, ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದರು.

