ಸಿದ್ದರಾಮಯ್ಯ-ಶಿವಕುಮಾರ್‌ಗೆ ಜನವರಿ 17ರ ನಂತರ ದೆಹಲಿಗೆ ಬುಲಾವ್
ಬೆಂಗಳೂರು:ದೇವರಾಜ ಅರಸು ದಾಖಲೆ ಮುರಿಯುತ್ತಿದ್ದಂತೆ ಅಧಿಕಾರ ಹಸ್ತಾಂತರ ವಿಚಾರಕ್ಕೆ ಅಂತಿಮ ಸ್ವರೂಪ ನೀಡಲು ಕಾಂಗ್ರೆಸ್ ವರಿಷ್ಠರು ಜನವರಿ 16ರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಗೆ ಬುಲಾವ್ ಮಾಡಲಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಬಿಡುಗಡೆ ಆಗುತ್ತಿದ್ದಂತೆ ಇದೇ ತಿಂಗಳ 16 ಇಲ್ಲವೇ 17ರಂದೇ ಎಐಸಿಸಿ ಸಭೆ ಕರೆಯಲು ನಿರ್ಧರಿಸಿದ್ದಾರೆ.
ದಾಖಲೆ ಮುರಿಯಲು ಅವಕಾಶ
ಅರಸು ದಾಖಲೆ ಮುರಿಯುವವರೆಗೂ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯಲು ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದರು, ಇದಕ್ಕೆ ಶಿವಕುಮಾರ್ ಒಪ್ಪಿಗೆಯೂ ಇತ್ತು.
ಮುಖ್ಯಮಂತ್ರಿ ಅಧಿಕಾರಾವಧಿ ದಾಖಲೆ ಮುರಿದ ನಂತರವೂ ಸಿದ್ದರಾಮಯ್ಯ ಗಾದಿಯಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದು, ಶಿವಕುಮಾರ್ ಸಿಟ್ಟು ನೆತ್ತಿಗೇರುವಂತೆ ಮಾಡಿದೆ.
ಇದೇ ಕಾರಣಕ್ಕೆ ನಿನ್ನೆ ಹಾವೇರಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲೇ ’ವರ್ಲ್ಡ್ ಪವರ್‌ಗಿಂತ ವರ್ಡ್ ಪವರ್ ಹೆಚ್ಚು’ ಎಂಬ ಟಾಂಗ್ ಮತ್ತೊಮ್ಮೆ ನೀಡಿದ್ದಾರೆ.
ವರಿಷ್ಠರ ಸಮ್ಮುಖದಲ್ಲಿ ಮಾತುಕತೆ
ಅಧಿಕಾರ ಹಂಚಿಕೆ ಕುರಿತು ವರಿಷ್ಠರ ಸಮ್ಮುಖದಲ್ಲಿ ನಡೆದ ಮಾತುಕತೆಯಂತೆ ನವೆಂಬರ್ 2025ರಲ್ಲೇ ಗಾದಿ ಬಿಟ್ಟುಕೊಡಬೇಕಿತ್ತು.
ಅರಸು ದಾಖಲೆ ಮುರಿಯಲು ಸಮಯಾವಕಾಶ ಕೋರಿದ್ದಲ್ಲದೆ, ಜನವರಿ 7ರ ನಂತರ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ ಎಂದು ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಹೇಳಿದ್ದರಂತೆ.
ಭರವಸೆ ಮೇಲೆ ಭರವಸೆ ನೀಡಿದ ನಂತರವೂ ಅಧಿಕಾರದಲ್ಲಿ ಮುಂದುವರೆಯುವ ಇಂಗಿತದ ಹೇಳಿಕೆ ನೀಡುತ್ತಿದ್ದಂತೆ, ಶಿವಕುಮಾರ್ ಮುಖ್ಯಮಂತ್ರಿ ಸಮ್ಮುಖದಲ್ಲೇ ಅವರ ಮಾತನ್ನು ನೆನಪಿಸುವ ಕೆಲಸ ಮಾಡಿದ್ದಾರೆ.
ಇನ್ನು ಎಷ್ಟು ದಿನ ಅಧಿಕಾರ
ಶಿವಕುಮಾರ್ ಸಾರ್ವಜನಿಕ ಸಭೆಯಲ್ಲೇ ಈ ಮಾತು ಹೇಳಿದ ನಂತರ ಮುಖ್ಯಮಂತ್ರಿ ನಗರಕ್ಕೆ ಆಗಮಿಸುವ ಮುನ್ನ ವಿಮಾನ ನಿಲ್ದಾಣದಲ್ಲಿ ಇನ್ನು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೋ ಎಂಬ ಮಾತುಗಳನ್ನು ಆಡಿದರು.
ಎರಡು ದಿನಗಳ ಹಿಂದಷ್ಟೇ ಸತತವಾಗಿ ಪೂರ್ಣಾವಧಿ ಮುಖ್ಯಮಂತ್ರಿ ಆಗಿರುತ್ತೇನೆಂದು ಹೇಳಿದ್ದ ಮುಖ್ಯಮಂತ್ರಿ, ದೆಹಲಿಯಿಂದ ಸಂದೇಶ ಬರುತ್ತಿದ್ದಂತೆ ಹಾವೇರಿಯಲ್ಲಿ ತಮ್ಮ ವರಸೆ ಬದಲಾಯಿಸಿದರು.

