ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವೈಫಲ್ಯದ ವಿರುದ್ಧ ಹಾಗೂ ಪಕ್ಷ ಸಂಘಟನೆ ದೃಷ್ಟಿಯಿಂದ ಜಾತ್ಯತೀತ ಜನತಾ ದಳ (ಜೆಡಿಎಸ್) ಹಾಸನದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.
ಪಕ್ಷಕ್ಕೆ 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬ ಆಚರಣೆ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮ ಇದಾಗಿದೆ.
ಹಾಸನದಲ್ಲಿ ಬೃಹತ್ ಸಮಾವೇಶ
ಜನವರಿ 24ರಂದು ನಡೆಯಲಿರುವ ಬೃಹತ್ ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸುಮಾರು 4ರಿಂದ 5 ಲಕ್ಷ ಕಾರ್ಯಕರ್ತರನ್ನು ಸೇರಿಸುವ ಮೂಲಕ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಗೆ ತಮ್ಮ ಬಲ ತೋರಿಸಲು ಪಕ್ಷ ಮುಂದಾಗಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ನಂತರ ಹಾಸನದಲ್ಲಿ ಜೆಡಿಎಸ್ ಅನ್ನು ಬೇರು ಸಮೇತ ಕಿತ್ತೊಗೆಯಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ಈ ಹಿಂದೆ ಹಾಸನ ನಗರದಲ್ಲೇ ಎರಡು ಬೃಹತ್ ಸಮಾವೇಶಗಳನ್ನು ನಡೆಸಿದ್ದರು.
ಕಾಂಗ್ರೆಸ್ ಸಮಾವೇಶಕ್ಕೆ ಉತ್ತರ
ನಾಲ್ಕೈದು ತಿಂಗಳ ಅಂತರದಲ್ಲಿ ನಡೆದ ಈ ಸಮಾವೇಶಗಳಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗಿಂತ ದೇವೇಗೌಡ ಮತ್ತು ಅವರ ಕುಟುಂಬ ಹಾಗೂ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದರು.
ಪ್ರಜ್ವಲ್ ಪ್ರಕರಣದ ನಂತರ ಜೆಡಿಎಸ್ ಮುಖಂಡರು ಹಾಸನದಲ್ಲಿ ಯಾವುದೇ ಸಂಘಟನಾತ್ಮಕ ಚಟುವಟಿಕೆ ಹಮ್ಮಿಕೊಂಡಿರಲಿಲ್ಲ.
ಜಿಲ್ಲಾ, ತಾಲ್ಲೂಕು ಹಾಗೂ ಪಂಚಾಯತ್ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಬೆಳ್ಳಿ ಹಬ್ಬ ಮುಂದಿಟ್ಟುಕೊಂಡು ಅದೇ ನೆಲದಲ್ಲಿ ಸಿದ್ದರಾಮಯ್ಯ ಅವರಿಗೆ ಉತ್ತರ ನೀಡಲು ಹೊರಟಿದ್ದಾರೆ.
ಕಾರ್ಯಕರ್ತರ ನಿರಂತರ ಸಭೆ
ದೇವೇಗೌಡ ಅವರು ಈಗಾಗಲೇ ಸಮಾವೇಶ ಸಂಬಂಧ ಕಾರ್ಯಕರ್ತರ ನಿರಂತರ ಸಭೆಗಳನ್ನು ನಡೆಸಿದ್ದು, ಕುಮಾರಸ್ವಾಮಿ ಹಾಸನಕ್ಕೆ ಎರಡು ಬಾರಿ ಭೇಟಿ ನೀಡಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಕುಮಾರಸ್ವಾಮಿ, ಪಕ್ಷದ ಹಾಲಿ ಶಾಸಕರು, ಮಾಜಿ ಸಚಿವರು ಶಾಸಕರು ಮತ್ತು ಪಕ್ಷದ ಮುಖಂಡರನ್ನು ಸಂಪರ್ಕಿಸಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಹಾಗೂ ತಮ್ಮ ಕ್ಷೇತ್ರಗಳ ಕಾರ್ಯಕರ್ತರನ್ನು ಕರೆತರುವಂತೆ ಸೂಚಿಸಿದ್ದಾರೆ.
ಆಡಳಿತ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ಗೊಂದಲದಿಂದ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆಗಳಿವೆ ಎಂಬ ಅನಿಸಿಕೆ ಅವರಲ್ಲಿದ್ದು, ಇದೇ ವೇದಿಕೆ ಮೂಲಕ ಕಾರ್ಯಕರ್ತರನ್ನು ಒಗ್ಗೂಡಿಸುವುದು ಮತ್ತು ಮುಂಬರುವ ಎಲ್ಲಾ ಚುನಾವಣೆಗಳನ್ನು ಎದುರಿಸಲು ಭೂಮಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

