ಬೆಂಗಳೂರು:ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಬದಿಗಿರಿಸಿ, ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮೂರು ವಾಕ್ಯಗಳಲ್ಲಿ ಸರ್ಕಾರದ ಸಾಧನೆಯನ್ನು ಓದಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸದನದಿಂದ ನಿರ್ಗಮಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಸೇರ್ಪಡೆ ಮಾಡಿದ್ದ 11 ಅಂಶಗಳನ್ನು ಕೈಬಿಟ್ಟಲ್ಲಿ ಮಾತ್ರ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುತ್ತೇನೆ, ಇಲ್ಲದಿದ್ದರೆ, ತಾವು ಬರುವುದೇ ಇಲ್ಲ ಎಂದು ನಿನ್ನೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸಂದೇಶ ರವಾನಿಸಿದ್ದರು.
ಒಂದು ನಿಮಿಷದ ಭಾಷಣ
ಆದರೆ, ಇಂದು ತಮ್ಮ ನಿರ್ಧಾರದಿಂದ ಹಿಂದೆ ಸರಿದು, ನಿಗದಿತ ಸಮಯಕ್ಕೆ ವಿಧಾನಸಭೆಗೆ ಆಗಮಿಸಿ, ತಾವು ಸಿದ್ಧಪಡಿಸಿ ತಂದಿದ್ದ ಮೂರು ವಾಕ್ಯಗಳನ್ನು ಒಂದು ನಿಮಿಷದಲ್ಲಿ ಓದಿ ಸದನದಿಂದ ನಿರ್ಗಮಿಸಿದರು.
ನನ್ನ ಸರ್ಕಾರ ರಾಜ್ಯದ ಆರ್ಥಿಕ, ಸಾಮಾಜಿಕ, ಭೌದ್ಧಿಕ ಅಭಿವೃದ್ಧಿಗೆ ಬದ್ಧವಾಗಿದೆ, ರಾಜ್ಯದ ಆರ್ಥಿಕ, ಸಾಮಾಜಿಕ, ಭೌದ್ಧಿಕ ವಿಕಾಸವನ್ನು ನನ್ನ ಸರ್ಕಾರ ದುಪ್ಪಟ್ಟುಗೊಳಿಸಲು ಕಟಿಬದ್ಧವಾಗಿದೆ, ಜೈಹಿಂದ್, ಜೈ ಕರ್ನಾಟಕ.
ಈ ವಾಕ್ಯಗಳನ್ನು ಓದಿ ಹೊರ ನಡೆಯುತ್ತಿದ್ದಂತೆ ರಾಜ್ಯಪಾಲರ ನಡೆಯನ್ನು ವಿರೋಧಿಸಿ ಆಡಳಿತ ಸದಸ್ಯರು ದಿಕ್ಕಾರ ಘೋಷಣೆಗಳನ್ನು ಕೂಗಿ, ಸರ್ಕಾರ ಸಿದ್ಧಪಡಿಸಿರುವ ಭಾಷಣವನ್ನು ಓದುವಂತೆ ಒತ್ತಾಯಿಸಿ ರಾಜ್ಯಪಾಲರನ್ನು ಸುತ್ತುವರಿಯಲು ಮುಂದಾದರು.
ಅಂಗರಕ್ಷಕರ ಪ್ರವೇಶ
ಈ ವೇಳೆ ಮಾರ್ಷಲ್‌ಗಳು ಹಾಗೂ ರಾಜ್ಯಪಾಲರ ಅಂಗರಕ್ಷಕರು ಒಳಪ್ರವೇಶಿಸಿ ಭದ್ರತೆಯಲ್ಲಿ ರಾಜ್ಯಪಾಲರನ್ನು ಕರೆದೊಯ್ದರು.
ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಮಾತಿನ ಚಕಮಕಿ ಗದ್ದಲದ ಮಧ್ಯೆಯೇ ಉಭಯ ಸದನಗಳ ಪೀಠಾಸೀನಾಧಿಕಾರಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ವಿಧಿವತ್ತಾಗಿ ರಾಜ್ಯಪಾಲರನ್ನು ಬೀಳ್ಕೊಟ್ಟರು.
ಮತ್ತೆ ಸದಸನ ಸಮಾವೇಶಗೊಂಡಾಗ ರಾಜ್ಯಪಾಲರ ನಡೆಯ ಕುರಿತು ಪರ ಮತ್ತು ವಿರೋಧವಾಗಿ, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಮಾತಿನ ಚಕಮಕಿ ನಡೆಸಿದರು.
ಸಭಾಧ್ಯಕ್ಷರ ಸಮರ್ಥನೆ
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ರಾಜ್ಯಪಾಲರು ಕಾನೂನು ಬದ್ಧವಾಗಿ ಉಭಯ ಸದನದ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿ ತೆರಳಿದ್ದಾರೆ ಎಂದರು.
ಸಭಾಧ್ಯಕ್ಷರು ಹೇಳಿಕೆ ನೀಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯಪಾಲರು ಭಾಷಣ ಮಾಡಿ ರಾಷ್ಟ್ರಗೀತೆ ನಿಯಮ ಪಾಲಿಸದೆ ತೆರಳಿದ್ದು ಸಂವಿಧಾನ ವಿರೋಧ ಎಂದರು.
ಸಚಿವರ ಮಾತಿಗೆ ಪ್ರತಿಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ರಾಜ್ಯಪಾಲರು ಕಾನೂನು ರೀತಿಯೇ ನಡೆದುಕೊಂಡಿದ್ದಾರೆ ಎನ್ನುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ವಿಷಯಕ್ಕೆ ತೆರೆ ಎಳೆದು ಮುಂದಿನ ಕಲಾಪವನ್ನು ಕೈಗೆತ್ತಿಕೊಂಡರು.

