ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಗೊಂದಲದಿಂದ ಹಲವು ಇಲಾಖೆಗಳ ಪ್ರಧಾನಕಾರ್ಯದರ್ಶಿಗಳೂ ಸೇರಿದಂತೆ ಸಚಿವರು ಹಾಗೂ ಶಾಸಕರ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ.
ಇದರ ಅನುಭವ ಸ್ವತಃ ಮುಖ್ಯಮಂತ್ರಿ ಅವರಿಗೂ ಆಗಿದ್ದು, ತಮ್ಮ ಮಾತನ್ನು ನಿರ್ಲಕ್ಷಿಸಿದ ಕಾರಣಕ್ಕೆ ಡಿಪಿಆರ್ ಕಾರ್ಯದರ್ಶಿ ಅವರಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಜನಪ್ರತಿನಿಧಿಗಳ ಮಾತಿಗೆ ಬೆಲೆಯಿಲ್ಲ
ಕೆಲವು ಸಚಿವರನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಮಂತ್ರಿಗಳು, ಶಾಸಕರು ಹಾಗೂ ಸಂಸದರ ಮಾತಿಗೆ ಅಧಿಕಾರಿಗಳು ಬೆಲೆಯನ್ನೇ ಕೊಡುತ್ತಿಲ್ಲ.
ತೆರವಾಗುವ ಹುದ್ದೆಗಳಿಗೆ ಸರ್ಕಾರ ಸಹಾ ಭರ್ತಿ ಮಾಡದೆ ಸಾವಿರಾರು ’ಎ’ ಮತ್ತು ’ಬಿ’ ಸೇರಿದಂತೆ ವಿವಿಧ ಶ್ರೇಣಿಯ ಅನೇಕ ಹುದ್ದೆಗಳು ಖಾಲಿ ಇವೆ.
ಈಗಿರುವ ಕೆಲವು ಅಧಿಕಾರಿಗಳಿಗೆ ಕೆಲಸ ನಿರ್ವಹಣೆಯ ಜಾಗ ತೋರಿಸದೆ, ಆರು ತಿಂಗಳಿಂದ ಹಿಡಿದು ವರ್ಷಾನುಗಟ್ಟಲೇ ಮನೆಯಲ್ಲೇ ಕುಳಿತು ಸಂಬಳ ಪಡೆಯುತ್ತಿದ್ದಾರೆ.
ಕಾಣದ ಕೈಗಳ ದರ್ಬಾರು
ಕೆಲವು ಸಚಿವರಿಗಂತೂ ಯಾವುದೇ ಅಧಿಕಾರ ಇಲ್ಲದೆ, ಅವರ ಇಲಾಖೆಯ ಎಲ್ಲಾ ಪ್ರಮುಖ ಕೆಲಸ ಕಾರ್ಯಗಳನ್ನು ಕಾಣದ ಕೈಗಳು ದರ್ಬಾರು ನಡೆಸುತ್ತಿದ್ದು, ಇದರ ವಿರುದ್ಧ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಶಾಸಕರು ತಮ್ಮ ಕ್ಷೇತ್ರಗಳಿಗೆ ಮಾಡಿದ ಶಿಫಾರಸುಗಳನ್ನು ಹಿರಿಯ ಅಧಿಕಾರಿಗಳು ಪರಿಗಣಿಸುತ್ತಿಲ್ಲ ಎಂಬುದು ಎಷ್ಟರ ಮಟ್ಟಿಗೆ ಇದೆ ಎಂದರೆ, ಜನಪ್ರತಿನಿಧಿಗಳು ಕೇಳುವ ಅಧಿಕಾರಿಗಳ ವರ್ಗಾವಣೆ ಇಲ್ಲದೆ ಅನೇಕ ಹುದ್ದೆಗಳು ಖಾಲಿ ಇವೆ.
ಇದು ಶಾಸಕರಿಗಷ್ಟೇ ಅಲ್ಲ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಹಾ ತಮ್ಮ ಇಲಾಖಾ ವರ್ಗಾವಣೆಗೆ ಸಂಬಂಧಿಸಿದಂತೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಕರೆಗೂ ನಿರ್ಲಕ್ಷ್ಯ
ಐಎಎಸ್, ಐಪಿಎಸ್, ಕೆಎಎಸ್ ಶ್ರೇಣಿಯ ಅಧಿಕಾರಿಗಳ ವರ್ಗಾವಣೆ ತೀರ್ಮಾನ, ಆಡಳಿತಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳುವ ಡಿಪಿಆರ್ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಕಾರ್ಯಾಲಯದಿಂದ ಎರಡು ಬಾರಿ ಕರೆ ಬಂದರೂ, ಅವರು ಅತ್ತ ಕಡೆ ಗಮನವೇ ಹರಿಸಿಲ್ಲ.
ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, ಸದರಿ ಅಧಿಕಾರಿ ಅಮಾನತಿಗೆ ಮುಖ್ಯಕಾರ್ಯದರ್ಶಿ ಅವರಿಗೆ ಸೂಚಿಸಿದ್ದರಾದರೂ, ಕೇವಲ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಶಾಸಕರ ಶಿಫಾರಸುಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಕೆಲವು ಅಧಿಕಾರಿಗಳಂತೂ ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನೂ ಸ್ವೀಕರಿಸುತ್ತಿಲ್ಲ.
ಜನಪ್ರತಿನಿಧಿಗಳ ದೂರು
ಈ ಬೆಳವಣಿಗೆಯಿಂದ ಬೇಸರಗೊಂಡ ಜನಪ್ರತಿನಿಧಿಗಳು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ದೂರುಗಳನ್ನು ನೀಡಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಆಡಳಿತಶಾಹಿ ನಡುವೆ ತೀವ್ರ ಕಂದಕ ನಿರ್ಮಾಣವಾಗುತ್ತಿದ್ದಂತೆ ಮುಖ್ಯಕಾರ್ಯದರ್ಶಿ ಅವರು, ಎಲ್ಲ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು, ಸಂಸದರು, ವಿಧಾನಮಂಡಲದ ಉಭಯ ಸದನಗಳ ಸದಸ್ಯರು ಕರೆ ಮಾಡಿದರೆ, ಸ್ವೀಕರಿಸಬೇಕು ಮತ್ತು ಅವರು ನೀಡುವ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುವಂತೆ ಸುತ್ತೋಲೆ ಹೊರಡಿಸಿದ್ದಾರೆ.
ಅಧಿಕಾರಿಗಳ ಅಸಡ್ಡೆ
ಕಳೆದ ಆರು ತಿಂಗಳಿಂದ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಆಡಳಿತದಲ್ಲಿ ಗೊಂದಲ ಉಂಟಾಗುತ್ತಿದ್ದಂತೆ ಕೆಲವು ಅಧಿಕಾರಿಗಳು ಅಸಡ್ಡೆ ತೋರುತ್ತಿರುವುದಲ್ಲದೆ ಅಭಿವೃದ್ಧಿ ಕಡೆ ಗಮನವೂ ಹರಿಸುತ್ತಿಲ್ಲ, ಜನಪ್ರತಿನಿಧಿಗಳ ಮಾತಿಗೂ ಬೆಲೆ ನೀಡುತ್ತಿಲ್ಲ.
ಅದರಲ್ಲೂ ನವೆಂಬರ್ 20ರ ನಂತರದ ಬೆಳವಣಿಗೆಗಳು ಅಧಿಕಾರಿಗಳನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದು, ಏನು ಮಾಡಿದರೆ, ಏನಾಗುತ್ತದೋ ಎಂಬ ಗೊಂದಲದಲ್ಲಿದ್ದು, ಅಧಿಕಾರ ಹಂಚಿಕೆ ವಿವಾದ ಬಗೆಹರಿದ ನಂತರ ಪರಿಶೀಲಿಸುವ ಮನೋಭಾವ ಹೊಂದಿದ್ದಾರೆ.

