ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪ
ಬೆಂಗಳೂರು:ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಆರ್‌ಎಸ್‌ಎಸ್ ಕಚೇರಿಯ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸದನದಲ್ಲಿಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಲೋಕಭವನ ಮತ್ತು ಆರ್‌ಎಸ್‌ಎಸ್ ಕಚೇರಿ ದೂರವಾಣಿ ಕಾದ್ದಾಲಿಕೆ ಮಾಡಲಾಗುತ್ತಿದೆ ಎಂಬುದು ಸ್ವತಃ ಕಾನೂನು ಸಚಿವ ಎಚ್.ಕೆ.ಪಾಟೀಲ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರ ಬಾಯಿಂದಲೇ ಬಂದಿದೆ.
ಉನ್ನತ ಮಟ್ಟದ ತನಿಖೆ ಆಗಬೇಕು
ಇವರದ್ದಷ್ಟೇ ಅಲ್ಲದೆ, ನನ್ನದೂ ಸೇರಿದಂತೆ ಇನ್ನೂ ಯಾರ‍್ಯಾರ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದೀರೋ ತಿಳಿಯದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಟೆಲಿಫೋನ್ ಕದ್ದಾಲಿಕೆ ಆರೋಪದ ಮೇಲೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಇದೆಲ್ಲ ತಿಳಿದ ನಂತರವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಫೋನ್ ಕದ್ದಾಲಿಕೆ ಮಾಡುತ್ತಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ದೂರವಾಣಿ ಕರೆ ಬಗ್ಗೆ ಯಾರು ಹೇಳಿದರು
ಸರ್ಕಾರ ಸಿದ್ಧ ಪಡಿಸಿದ ಭಾಷಣ ಓದದಂತೆ ರಾಜ್ಯಪಾಲರಿಗೆ ಕೇಂದ್ರದಿಂದ ದೂರವಾಣಿ ಕರೆ ಬಂದಿತ್ತು ಎಂಬುದಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ, ಹಾಗಾದರೆ ಇವರಿಗೆ ದೂರವಾಣಿ ಕರೆ ಬಂದಿತ್ತೆಂಬುದನ್ನು ಯಾರು ಹೇಳಿದರು ಎಂದರು.
ಮಧ್ಯಪ್ರವೇಶಿಸಿದ ಸಚಿವ ಪಾಟೀಲ್, ಕೇಂದ್ರ ಗೃಹ ಸಚಿವಾಲಯದಿಂದಲೇ ರಾಜ್ಯಪಾಲರಿಗೆ ದೂರವಾಣಿ ಕರೆ ಬಂದಿದೆ ಎನ್ನುತ್ತಿದ್ದಂತೆ, ಪ್ರಿಯಾಂಕ್ ಖರ್ಗೆ, ಅಷ್ಟೇ ಅಲ್ಲ ಆರ್‌ಎಸ್‌ಎಸ್ ಕಚೇರಿಯಿಂದಲೂ ಬಂದಿದೆ ಎಂದರು.
ಅಶೋಕ್ ಮಾತನಾಡಿ, ಅವರಿಗೆ ಕರೆಗಳು ಬಂದಿರುವುದು ನಿಮಗೆ ಹೇಗೆ ತಿಳಿಯಿತು, ನೀವು ಲೋಕಭವನ ಮತ್ತು ಆರ್‌ಎಸ್‌ಎಸ್ ಕಚೇರಿಗಳ ಫೋನ್ ಕದ್ದಾಲಿಕೆ ಮಾಡುತ್ತಿದ್ದೀರಿ.
ಸಚಿವರಿಂದಲೇ ಆರೋಪ
ಈ ಕುರಿತು ನಾವು ಆರೋಪ ಮಾಡುತ್ತಿಲ್ಲ, ನಿಮ್ಮ ಬಾಯಿಂದಲೇ ಬಂದಿದೆ, ಇದರ ತನಿಖೆ ಆಗಲೇಬೇಕು ಎಂದು ಪಟ್ಟು ಹಿಡಿದರು.
ಕದ್ದಾಲಿಕೆ ವಿಚಾರವನ್ನು ಅಶೋಕ್ ಬಲವಾಗಿ ಪ್ರತಿಪಾದಿಸುತ್ತಿದ್ದಂತೆ, ಆಡಳಿತ ಪಕ್ಷದ ಕೆಲವು ಸದಸ್ಯರು ಪ್ರತಿಭಟಿಸಿ ಗದ್ದಲ ಎಬ್ಬಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ಜೋರಾಗುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

