ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದಲ್ಲಿ ಮುಖ್ಯಮಂತ್ರಿ ಪ್ರಶ್ನೆ ಏತಕ್ಕೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿನ ಭ್ರಷ್ಟ, ಕೆಟ್ಟ ಸರ್ಕಾರ ತೆಗೆದು, ಜನರ ಭಾವನೆಗೆ ಸ್ಪಂದಿಸುವ ಆಡಳಿತ ತರುವುದೇ ನನ್ನ ಗುರಿ ಎಂದಿದ್ದಾರೆ.
113 ಸ್ಥಾನ ಗೆದ್ದು ಮುಖ್ಯಮಂತ್ರಿ ಆಗಲಿ
ಎಚ್.ಡಿ.ಕುಮಾರಸ್ವಾಮಿ ಬೇಕಿದ್ದರೆ 113 ಸ್ಥಾನ ಗೆದ್ದು ಮುಖ್ಯಮಂತ್ರಿ ಆಗಲಿ ಎಂಬುದಾಗಿ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು 100 ಬಾರಿ ಹೇಳಿದ್ದೇನೆ, ಇಲ್ಲಿನ ಭ್ರಷ್ಟ, ಕೆಟ್ಟ ಸರ್ಕಾರ ತೆಗೆಯಬೇಕು, ಮುಖ್ಯಮಂತ್ರಿ ಆಗುವುದೆಲ್ಲಾ ಮುಂದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಜನಪರ ಸರ್ಕಾರ ಬರಬೇಕು, ಅದೇ ನನ್ನ ಅಜೆಂಡಾ, ಇಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆ, ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದರು ಎಂಬಂತಾಗಿದೆ.
ಮೊದಲು ಮೈತ್ರಿ ಸರ್ಕಾರ ತರೋಣ
ಚುನಾವಣೆಗೆ ಇನ್ನೂ ಎರಡು ವರ್ಷ ಇದೆ, ನಾವು ಶ್ರಮ ವಹಿಸಿ ಮೈತ್ರಿ ಸರ್ಕಾರ ತರೋಣ, ಅದು ನಮ್ಮೆಲ್ಲರ ಗುರಿ ಆಗಬೇಕು.
ಹಾದಿಬೀದಿಯಲ್ಲಿ ಹೇಳಿಕೆ ನೀಡುವವರಿಗೆಲ್ಲಾ ನಾನು ಉತ್ತರಿಸಲಾಗದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣಾ ಮೈತ್ರಿ ದೆಹಲಿ ಮಟ್ಟದಲ್ಲಿ ನಡೆಯುತ್ತದೆ, ಈಗಲೇ ಮಾತನಾಡಿದರೆ ಏನು ಪ್ರಯೋಜನ ಎಂದರು.

