ಬೆಂಗಳೂರು:ಸದನದಲ್ಲಿ ಶಾಸಕರ ಪ್ರಸ್ತಾವಗಳಿಗೆ ಸಮರ್ಪಕ ಉತ್ತರ ದೊರಕಿಸಲು ವಿಫಲರಾಗಿದ್ದಾರೆ ಎಂಬ ಆರೋಪದ ಮೇಲೆ ಕಂದಾಯ ಇಲಾಖೆ ಪ್ರಧಾನಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಸೇರಿದಂತೆ 8 ಐಎಎಸ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕಠಾರಿಯಾ ಜೊತೆ ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಆರ್.ವಿನೋತ್ ಪ್ರಿಯ, ವಸತಿ ಇಲಾಖೆಯ ಕೆ.ಪಿ.ಮೋಹನ್ ರಾಜ್, ಸಾರಿಗೆ ಇಲಾಖೆಯ ಎನ್.ವಿ.ಪ್ರಸಾದ್.
ನೋಟಿಸ್ ಜಾರಿ
ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಆರ್.ಗಿರೀಶ್, ಲೋಕೋಪಯೋಗಿ ಇಲಾಖೆಯ ಆಮ್ಲಾನ್ ಆದಿತ್ಯಯ ಬಿಸ್ವಾಸ್ ಅವರುಗಳಿಗೆ ನೋಟಿಸ್ ಜಾರಿ ಮಾಡಿ, ಕೂಡಲೇ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.
ಸೋಮವಾರ ಉಭಯ ಸದನಗಳಲ್ಲೂ ಸದಸ್ಯರ ಪ್ರಸ್ತಾವಗಳಿಗೆ ಉತ್ತರ ನೀಡಲು ಸಚಿವರೇ ಇಲ್ಲ, ಅವರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದಾಗಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು.
ಅಧಿಕಾರಿಗಳು ನೀಡುವ ಮಾಹಿತಿಯನ್ನೇ ಮುಂದಿಟ್ಟುಕೊಂಡು ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ, ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ವಿರೋಧ ಪಕ್ಷದವರು ಆಗ್ರಹಿಸಿದ್ದರು.
ಸರ್ಕಾರವನ್ನೇ ಸಾಯಿಸಿದ್ದಾರೆ
ಅಧಿಕಾರಿಗಳು ಸರ್ಕಾರವನ್ನೇ ಸಾಯಿಸಿದ್ದಾರೆ, ಇನ್ನು ತಿಥಿ ಮಾಡಬೇಕಿದೆ ಅಷ್ಟೇ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರು ಮಾಡಿದ ಟೀಕೆಗೆ ಸ್ಪಂದಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ಕಲಾಪ ಮುಂದೂಡಿ ಸದನದಿಂದಲೇ ಹೊರ ನಡೆದಿದ್ದರು.
ಸುಮಾರು ನಾಲ್ಕು ಗಂಟೆಗಳ ನಂತರ ಸದನದ ಕಲಾಪ ಆರಂಭಿಸಲೂ ಸಭಾಧ್ಯಕ್ಷರು ಮುಂದಾಗಿರಲಿಲ್ಲ, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳೇ ಮಧ್ಯಪ್ರವೇಶಿಸಿ, ಅಲ್ಲಿಗೇ ಮುಖ್ಯಕಾರ್ಯದರ್ಶಿ ಅವರನ್ನು ಕರೆಸಿ, ಸದನಕ್ಕೆ ಅಗೌರವ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದ್ದರು.
ವಿಷಯ ತಿಳಿಯಾಗುತ್ತಿದ್ದಂತೆ ಸಭಾಧ್ಯಕ್ಷರು ಮಧ್ಯಾನ್ಹದ ನಂತರ ಕಲಾಪವನ್ನು ಆರಂಭಿಸಿದರಲ್ಲದೆ, ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದರು.
ವಿವರಣೆ ಕೇಳಿ ನೋಟಿಸ್
ಈ ಬೆಳವಣಿಗೆ ನಂತರ ಮುಖ್ಯಕಾರ್ಯದರ್ಶಿ ಅವರು, 8 ಇಲಾಖೆಗಳ ಪ್ರಧಾನಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದಾರೆ.
ಸಭಾಧ್ಯಕ್ಷರ ಆದೇಶದ ಮೇರೆಗೆ ದೊಡ್ಡ ಪ್ರಮಾಣದಲ್ಲಿ ಇಂತಹ ನಿರ್ಣಯ ಕೈಗೊಂಡಿರುವುದು ಸದನದ ಇತಿಹಾಸದಲ್ಲಿ ಇದೇ ಮೊದಲು.

