ಹುಬ್ಬಳ್ಳಿ:ನಾನು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ, ಅಧಿಕಾರ ಬದಲಾವಣೆ ವಿಚಾರದಲ್ಲಿ ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಹೊರತಾಗಿ ಬೇರೆಯವರ ಮಾತು ಗೌಣ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೆ ಎಂಬ ಸಚಿವ ಡಾ.ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಚುನಾವಣೆ ಬಳಿಕ ಚರ್ಚೆ
ಚುನಾವಣೆ ಬಳಿಕ ನಾಯಕತ್ವ ಬದಲಾವಣೆ ಚರ್ಚೆ ವಿಚಾರವನ್ನು ಮಾಧ್ಯಮಗಳು ಸಮಸ್ಯೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ, ಎಲ್ಲಕ್ಕೂ ಕಾಲವೇ ಉತ್ತರಿಸಲಿದೆ.
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಪಕ್ಷದ ಪರ ಚೆನ್ನಾಗಿ ಪ್ರಚಾರ ನಡೆದಿದೆ, ಎರಡೂ ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ, ನಮ್ಮ ಸರ್ಕಾರದ ಕಾರ್ಯಕ್ರಮಗಳಿಂದ ಜನ ತೃಪ್ತರಾಗಿದ್ದಾರೆ.
ಪ್ರಸ್ತುತ ಬೆಲೆ ಏರಿಕೆ ಬಗ್ಗೆ ಬಿಜೆಪಿ ನಾಯಕರು ಬಾಯಿ ಬಿಡುತ್ತಿಲ್ಲ, ಕೇಂದ್ರ ಸರ್ಕಾರ ಯಾವುದೇ ಪರಿಹಾರವನ್ನೂ ಪ್ರಕಟಿಸಿಲ್ಲ, ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಸ್ವಲ್ಪ ಪ್ರಮಾಣದ ನೆರವು ಸಿಕ್ಕಿದೆ.
ರಾಜ್ಯಕ್ಕೆ ಸಹಾಯ ಮಾಡಬೇಕು
ಅಡುಗೆ ಅನಿಲ ಕೊರತೆ ಸಮಸ್ಯೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ರಾಜ್ಯಕ್ಕೆ ಸಹಾಯ ಮಾಡಬೇಕು, ಕೊಲ್ಲಿ ರಾಷ್ಟ್ರಗಳಿಂದ ಇಂಧನ ತಂದ ಎರಡು ಹಡಗುಗಳು ಗುಜರಾತಿಗೆ ಹೋಗಿದ್ದು ಏಕೆ, ಮಂಗಳೂರು, ಕೇರಳ ಬಂದರಿಗೆ ಏಕೆ ಬರಲಿಲ್ಲ, ಕೇವಲ ಉತ್ತರ ಭಾರತದತ್ತ ಮಾತ್ರ ನೋಡುತ್ತಿದ್ದಾರೆ, ದಕ್ಷಿಣ ಭಾರತವನ್ನು ನಿರ್ಲಕ್ಷಿಸುತ್ತಿದ್ದಾರೆ, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಇಲ್ಲ, ಹೀಗಾಗಿ ರಾಜಕೀಯ ಮಾಡುತ್ತಿದ್ದಾರೆ.
ನಾನು ಹಾಗೂ ಕೆಲವು ಶಾಸಕರು ಕೇರಳಂ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದೇವೆ, ಈ ಬಾರಿ ಯುಡಿಎಫ್ ಮೈತ್ರಿಕೂಟಕ್ಕೆ ಮೂರನೇ ಎರಡರಷ್ಟು ಬಹುಮತ ಸಿಗುವ ವಿಶ್ವಾಸವಿದೆ, 10 ವರ್ಷಗಳ ಎಲ್‌ಡಿಎಫ್ ಆಡಳಿತದಿಂದ ಜನ ಬೇಸರಗೊಂಡಿದ್ದಾರೆ, ಬಿಜೆಪಿ ಜತೆ ಒಳಒಪ್ಪಂದ ಮಾಡಿಕೊಂಡಿದ್ದು, ಯಾವುದೇ ಅಭಿವೃದ್ಧಿಯಾಗಿಲ್ಲ ಎಂದರು.


