ಬೆಂಗಳೂರು:ವೈದ್ಯಕೀಯ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಮೇ 3ರಂದು ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ.
ಈ ಸಂಬಂಧ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸಾಮಾಜಿಕ ಮಾಧ್ಯಮಗಳಲ್ಲಿ ಪರೀಕ್ಷೆ ರದ್ದಾಗಿರುವುದನ್ನು ಪ್ರಕಟಿಸಿದೆ.
ಕರ್ನಾಟಕದ 1.50 ಲಕ್ಷ ವಿದ್ಯಾರ್ಥಿಗಳು
ಕರ್ನಾಟಕದಲ್ಲಿನ 15,000 ವೈದ್ಯಕೀಯ ಸೀಟುಗಳಿಗಾಗಿ 1.50 ಲಕ್ಷ ವಿದ್ಯಾರ್ಥಿಗಳು ಮೇ 3ರಂದು ಪರೀಕ್ಷೆ ಬರೆದಿದ್ದರು.
ರಾಜಾಸ್ತಾನ ಮತ್ತು ಕೇರಳಂ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆದ್ದರಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳೂ ಮತ್ತೊಮ್ಮೆ ಪರೀಕ್ಷೆ ಬರೆಯುವಂತಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿರುವುದಲ್ಲದೆ, ಎನ್‌ಟಿಎಯಿಂದ ವಿವರಣೆ ಕೇಳಿದೆ.
ಕೇಂದ್ರ ತನಿಖಾ ಸಂಸ್ಥೆಗಳ ವರದಿ
ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಗಳ ಪ್ರಾಥಮಿಕ ವರದಿ ಆಧಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ನೀಟ್-ಯುಜಿ ಪರೀಕ್ಷೆ ರದ್ದುಗೊಳಿಸಲು ನಿರ್ಧರಿಸಲಾಯಿತು ಎಂದು ಎನ್‌ಟಿಎ ಟ್ವೀಟ್ ಮೂಲಕ ತಿಳಿಸಿದೆ.
ನೀಟ್ ಮರುಪರೀಕ್ಷೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು, ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐಗೆ ವಹಿಸಿರುವುದರಿಂದ ಈ ಸಂಬಂಧದ ವಿಚಾರಣೆಗೆ ಬೇಕಾದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.
ಮರುಪರೀಕ್ಷೆ ಬರೆಯಲು ಹೊಸದಾಗಿ ಹೆಸರು ನೋಂದಣೆ ಮಾಡಿಸಬೇಕಿಲ್ಲ ಎಂದಿರುವ ಸಂಸ್ಥೆ, ಹೆಚ್ಚುವರಿ ಪರೀಕ್ಷೆ ಶುಲ್ಕವನ್ನೂ ವಿಧಿಸುವುದಿಲ್ಲ, ಈಗಾಗಲೇ ಪಾವತಿಸಿರುವ ಶುಲ್ಕ ಹಿಂತಿರುಗಿಸುವುದಾಗಿ ಹೇಳಿದೆ.
ಮರುಪರೀಕ್ಷೆ ಮಾಹಿತಿ
ಮರುಪರೀಕ್ಷೆಗೆ ಸಂಬಂಧಿಸಿದಂತೆ ಎನ್‌ಟಿಎನ ಅಧಿಕೃತ ವೆಬ್‌ಸೈಟ್ ಮೂಲಕವೇ ಮಾಹಿತಿ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮನವಿ ಮಾಡಿದೆ.
ಈ ಹಿಂದೆ ರಾಜಾಸ್ತಾನ ರಾಜ್ಯದಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ, ಆಗಲೂ ಸಿಬಿಐ ತನಿಖೆ ನಡೆಸಿ ಕೆಲವರನ್ನು ವಶಕ್ಕೆ ಪಡೆಯಲಾಗಿತ್ತು.
2026-27ನೇ ಸಾಲಿಗೆ ನಡೆದ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಮತ್ತೆ ಅದೇ ರಾಜ್ಯದಲ್ಲಿ ಸೋರಿಕೆಯಾಗಿರುವ ಆರೋಪಗಳು ಕೇಳಿಬಂದಿವೆ.
ವಿಶೇಷ ಕಾರ್ಯಾಚರಣೆ
ಪರೀಕ್ಷೆಗಿಂತ ಮೊದಲು ಸೋರಿಕೆಯಾದ ಪ್ರಶ್ನೆ ಪತ್ರಿಕೆಯಲ್ಲಿನ ಪಶ್ನೆಗಳು ಅಸಲಿ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳೊಂದಿಗೆ ಹೋಲಿಕೆ ಆಗುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜಾಸ್ತಾನ ಪೋಲಿಸರು ವಿಶೇಷ ಕಾರ್ಯಾಚರಣೆ ನಡೆಸಿ ವರದಿ ನೀಡಿದ್ದರು.
ರಾಷ್ಟ್ರದಲ್ಲಿ ಒಟ್ಟಾರೆ 22.79 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ತೆಗೆದುಕೊಂಡಿದ್ದು, ಇದರಲ್ಲಿ ರಾಜ್ಯದ 1.50 ಲಕ್ಷ ಅಭ್ಯರ್ಥಿಗಳಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಕೇಂದ್ರದ ತನಿಖಾ ಸಂಸ್ಥೆಗಳ ಪ್ರಾಥಮಿಕ ವರದಿ ಆಧಾರದ ಮೇಲೆ ಮರುಪರೀಕ್ಷೆಗೆ ನಿರ್ಧರಿಸಲಾಯಿತು.


