ಬೆಂಗಳೂರು:ರಾಜಧಾನಿ ನಗರದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಿರುವ 7 ಲಕ್ಷ ಮನೆಗಳಿಗೆ ಒಂದು ಭಾರಿಯ ಪರಿಹಾರವಾಗಿ ಸಕ್ರಮಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮನೆ ಮತ್ತು ನಿವೇಶನಗಳನ್ನು ’ಬಿ’ ಖಾತೆಯಿಂದ ’ಎ’ಖಾತೆಗೆ ಪರಿವರ್ತಿಸಿಕೊಳ್ಳಲು 100 ದಿನಗಳ ಕಾಲಾವಕಾಶ ನೀಡಿದ್ದು, ಮಾರ್ಗಸೂಚಿ ದರಗಳಲ್ಲಿ ಭಾರೀ ರಿಯಾಯಿತಿ ಘೋಷಿಸಿದೆ.
ಉಳಿದ ಪ್ರದೇಶಕ್ಕೂ ವಿಸ್ತರಣೆ ಚಿಂತನೆ
ಬೆಂಗಳೂರಿಗೆ ಸೀಮಿತವಾಗಿ ಕೈಗೊಂಡಿರುವ ತೀರ್ಮಾನ ಉಳಿದ ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸುವ ಬಗ್ಗೆ ಚಿಂತನೆ ನಡೆದಿದೆ.
ರಿಯಾಯಿತಿ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬೆಂಗಳೂರು ಉಸ್ತುವಾರಿ ಹೊಣೆ ಹೊತ್ತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ’ನಮ್ಮ ಖಾತೆ-ನಮ್ಮ ಹಕ್ಕು’ ಅಭಿಯಾನದ ಮೂಲಕ ಆಸ್ತಿ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಬೃಹತ್ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ನಗರದಲ್ಲಿ 23 ಲಕ್ಷ ಆಸ್ತಿ
ನಗರದಲ್ಲಿ 23 ಲಕ್ಷ ಆಸ್ತಿಗಳಿದ್ದು ಇವುಗಳ ದಾಖಲೆಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಪಾರದರ್ಶಕತೆ ತರಲು ಸರ್ಕಾರ ಮುಂದಾಗಿದೆ.
ಪ್ರತಿಯೊಂದು ಆಸ್ತಿಯನ್ನು ಜಿಪಿಎಸ್ ಮೂಲಕ ಮ್ಯಾಪಿಂಗ್ ಮಾಡಿ, ನಿವೇಶನದ ನಿರ್ದಿಷ್ಟ ಜಾಗ ಮತ್ತು ಮಾಲೀಕರ ಭಾವಚಿತ್ರ ಇರುವ ದಾಖಲೆಗಳನ್ನು ಸಿದ್ಧಪಡಿಸಲಾಗುವುದು.
ನಕಲಿ ದಾಖಲೆ ಸೃಷ್ಟಿ ತಡೆಯಲು ಈ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಇದೇ 16ರಿಂದ ಅಭಿಯಾನ ಆರಂಭಿಸಿ, ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಸಂಬಂಧಪಟ್ಟ ಕಡತಗಳನ್ನು ತಲುಪಿಸಲಿದ್ದಾರೆ ಎಂದರು.
ಮಾರ್ಗಸೂಚಿ ದರ ಇಳಿಕೆ
’ಬಿ’ ಖಾತೆಯಿಂದ ’ಎ’ ಖಾತೆಗೆ ಪರಿವರ್ತಿಸಲು ಈ ಹಿಂದೆ ಶೇ.5ರಷ್ಟು ಮಾರ್ಗಸೂಚಿ ದರ ಪಾವತಿಸಬೇಕಿತ್ತು, ಈಗ, ಶುಲ್ಕವನ್ನು ಶೇ.2ಕ್ಕೆ ಇಳಿಸಲಾಗಿದೆ.
ಉದಾಹರಣೆಗೆ 5 ಲಕ್ಷ ರೂ.ಗೆ ಬದಲಾಗಿ 2 ಲಕ್ಷ ರೂ. ಪಾವತಿಸಿದರೆ ಸಾಕು, ಈ ರಿಯಾಯಿತಿ ಸೌಲಭ್ಯ 100 ದಿನಗಳವರೆಗೆ ಮಾತ್ರ ಇರಲಿದೆ ಎಂದರು.
ರಿಯಾಯಿತಿ ಶೇ.15ಕ್ಕೆ
ನಗರ ಯೋಜನೆ ಕಾನೂನು ಉಲ್ಲಂಘನೆ ಪ್ರಕರಣಗಳಲ್ಲಿ ಶೇಕಡಾ 5ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು, ಈಗ ಇದನ್ನು ಶೇ.15ಕ್ಕೆ ವಿಸ್ತರಿಸಲಾಗಿದೆ.
ಹದಿನೈದು ವರ್ಷಗಳ ಹಿಂದೆ ಮನೆ ಕಟ್ಟಿದವರಿಗೆ ಮಾರ್ಗಸೂಚಿ ದರಗಳಲ್ಲಿ ಭಾರೀ ರಿಯಾಯಿತಿ ನೀಡಲಾಗಿದೆ, ಆಸ್ತಿ ವಿಸ್ತೀರ್ಣಕ್ಕೆ ಅನುಗುಣವಾಗಿ ಶೇ.10ರಿಂದ ಶೇ.50ರವರೆಗೆ ಇದ್ದ ಶುಲ್ಕಗಳಲ್ಲಿ ಗಮನಾರ್ಹ ಕಡಿತ ಮಾಡಲಾಗಿದೆ ಎಂದರು.


